ಬೆಂಗಳೂರು: ನೂತನ ಉದ್ಯೋಗ ನೀತಿಯನ್ನು ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆಗಾಗಿ ಮಂಡಿಸಬೇಕು. ಅದಕ್ಕೆ ಎಲ್ಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಉದ್ಯೋಗ ನೀತಿ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ನೀತಿಯಲ್ಲಿ ಉದ್ಯೋಗ ಸೃಜನೆ ಹೆಚ್ಚಾಗಿ ಮಾಡುವ ವಸ್ತ್ರೋದ್ಯಮ, ಎಫ್ಎಂಸಿಜಿ ಮತ್ತಿತರ ಹೆಚ್ಚಿನ ಮಾನವಸಂಪನ್ಮೂಲ ಬೇಡಿಕೆ ಇರುವ ಉದ್ಯಮಗಳಿಗೆ ಪ್ರೋತ್ಸಾಹ ನೀಡುವಂತೆ ಸೂಚಿಸಿದರು. ಇದರೊಂದಿಗೆ ಕೈಗಾರಿಕೋದ್ಯಮಗಳಲ್ಲಿ ಬೇಡಿಕೆ ಇರುವ ಕ್ಷೇತ್ರಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಇನ್ನಷ್ಟು ಹೆಚ್ಚಿಸಲು ಸಲಹೆ ನೀಡಿದರು.
ಕೌಶಲ್ಯಾಭಿವೃದ್ಧಿ ತರಬೇತಿಯನ್ನು ವಿಕೇಂದ್ರೀಕರಣಗೊಳಿಸಬೇಕು. ಪ್ರತಿ ಐಟಿಐ, ಜಿಟಿಟಿಸಿಗಳಲ್ಲಿ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸಬೇಕು. ಗುಣಮಟ್ಟದ, ಪ್ರಾಯೋಗಿಕ ಅನುಭವ ನೀಡುವ ತರಬೇತಿ ನೀಡಲು ಕ್ರಮ ವಹಿಸುವಂತೆ ಹಾಗೂ ಇದಕ್ಕೆ ಉದ್ಯಮಗಳ ಸಹಯೋಗ ಪಡೆಯುವಂತೆ ತಿಳಿಸಿದರು.
ಕೌಶಲ್ಯಾಭಿವೃದ್ಧಿ ತರಬೇತಿ ನಡೆಸಲು ಉತ್ತೇಜನ: ರಾಜ್ಯದಲ್ಲಿ ಈಗಾಗಲೇ ಉನ್ನತೀಕರಿಸಿದ ಐಟಿಐಗಳು ಹಾಗೂ ಜಿಟಿಟಿಸಿಗಳಲ್ಲಿ ಅಲ್ಪಾವಧಿಯ ಕೌಶಲ್ಯಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು. ಇದರೊಂದಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಕೈಗಾರಿಕೋದ್ಯಮಗಳು ಕೌಶಲ್ಯಾಭಿವೃದ್ಧಿ ತರಬೇತಿ ನಡೆಸಲು ಉತ್ತೇಜನ ನೀಡುವಂತೆ ಹೇಳಿದರು.
ಇದರೊಂದಿಗೆ ರಾಜ್ಯದಲ್ಲಿ ಸೃಜನೆಯಾಗುವ ಉದ್ಯೋಗಾವಕಾಶಗಳು ಹಾಗೂ ಉದ್ಯೋಗ ಪಡೆದವರ ದತ್ತಾಂಶ ಸಂಗ್ರಹಕ್ಕೆ ವ್ಯವಸ್ಥೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ರಾಜ್ಯದ ಉನ್ನತ ಮಟ್ಟದ ಒಪ್ಪಿಗೆ ಸಮಿತಿಯಲ್ಲಿ ಅನುಮೋದನೆಯಾದ ಯೋಜನೆಗಳು ನಿಗದಿತ ಅವಧಿಯಲ್ಲಿ ಜಾರಿಗೊಂಡಿವೆಯೇ? ಇಂತಹ ಕೈಗಾರಿಕೋದ್ಯಮಗಳು ತಮಗೆ ಹಂಚಿಕೆಯಾಗಿರುವ ಭೂಮಿಯನ್ನು ಬಳಸಿಕೊಂಡಿವೆಯೇ? ಎಂದು ವರದಿ ಸಲ್ಲಿಸುವಂತೆ ಹಾಗೂ ನಿಗದಿತ ಅವಧಿಯಲ್ಲಿ ಜಾರಿಯಾಗದ ಯೋಜನೆಗಳಿಗೆ ಹಂಚಿಕೆಯಾದ ಭೂಮಿಯನ್ನು ಹಿಂಪಡೆಯುವಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶಿಕ್ಷಣ ನೀಡುವಂತೆ ಸೂಚನೆ: ಉದ್ಯಮಶೀಲತೆ ಅಭಿವೃದ್ಧಿಗೆ, ಆಸಕ್ತ ಅಭ್ಯರ್ಥಿಗಳಿಗೆ, ಉದ್ಯಮ ಸ್ಥಾಪನೆಗೆ ಕೈಗೊಳ್ಳಬೇಕಾದ ಅಗತ್ಯ ಸಿದ್ಧತೆಗಳು, ದೊರೆಯುವ ಸೌಲಭ್ಯಗಳು, ಸಂಪನ್ಮೂಲ ಕ್ರೂಢೀಕರಣ ಮೊದಲಾದ ವಿಷಯಗಳ ಕುರಿತು ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶಾಲಾ ಹಂತದಲ್ಲಿಯೇ ತಾಂತ್ರಿಕ ತರಬೇತಿ ನೀಡುವ ಟೆಕ್ನಿಕಲ್ ಸ್ಕೂಲ್ಗಳನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ತಲಾ ನಾಲ್ಕು ಹೈಸ್ಕೂಲ್ ಹಾಗೂ ಪಿ.ಯು ಕಾಲೇಜುಗಳಲ್ಲಿ ಈ ಶಿಕ್ಷಣ ನೀಡುವಂತೆ ನಿರ್ದೇಶಿಸಿದರು.
ಉದ್ಯೋಗ ನೀತಿಯು ಉದ್ಯೋಗ ಸೃಜನೆ ಹಾಗೂ ಕುಶಲ ಮಾನವ ಸಂಪನ್ಮೂಲ ಸೃಜನೆಗೆ ಪೂರಕವಾಗುವಂತೆ ರೂಪಿಸಬೇಕು ಎಂದು ಸಲಹೆ ನೀಡಿದ ಮುಖ್ಯಮಂತ್ರಿ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ನೀತಿ ಅನುಮೋದನೆಗಾಗಿ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಐಟಿ-ಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ. ಎನ್ ಅಶ್ವತ್ಥನಾರಾಯಣ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ. ವಿ ರಮಣರೆಡ್ಡಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಓದಿ: ಬಿಬಿಎಂಪಿ ವಾರ್ಡ್ ಮರು ವಿಂಡಗಣೆ ಸಂಬಂಧ ಕೇವಲ 107 ಆಕ್ಷೇಪಣೆ ಮಾತ್ರ ಬಂದಿದೆ: ಪಾಲಿಕೆ ವಿಶೇಷ ಆಯುಕ್ತ ದೀಪಕ್ ಕುಮಾರ್