ಬೆಂಗಳೂರು: ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಸದಾಶಿವನಗರ ಬಡಾವಣೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಶಾಂಭವಿ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಅವರನ್ನು ಎಸ್ಎಂಕೆ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಸಿಎಂ ಬೊಮ್ಮಾಯಿ, ಹಿರಿಯ ನಾಯಕ ಕೃಷ್ಣ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ನಂತರ ಪರಸ್ಪರ ಕುಶಲೋಪರಿ ವಿಚಾರಿಸಿ ಕೆಲ ಸಮಯ ಮಾತುಕತೆ ನಡೆಸಿದರು. ಹಿಂದಿನ ರಾಜಕಾರಣ, ಇಂದಿನ ರಾಜಕಾರಣದ ಕುರಿತು ಮೆಲುಕು ಹಾಕಿದರು. ಎಸ್.ಆರ್.ಬೊಮ್ಮಾಯಿ ಅವರೊಂದಿಗಿನ ಒಡನಾಟ ನೆನಪಿಸಿಕೊಂಡ ಕೃಷ್ಣ, ರಾಜ್ಯದ ನೂತನ ಮುಖ್ಯಮಂತ್ರಿ ಯಶಸ್ವಿಯಾಗಿ ಆಡಳಿತ ನಡೆಸುವಂತೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಸಚಿವರಾದ ಎಸ್.ಟಿ. ಸೋಮಶೇಖರ್, ಡಾ. ಕೆ. ಸುಧಾಕರ್, ಡಾ.ನಾರಾಯಣ ಗೌಡ, ಬೈರತಿ ಬಸವರಾಜ ಉಪಸ್ಥಿತರಿದ್ದರು.
ಇದನ್ನೂ ಓದಿ: ಖ್ಯಾತ ಮಲಯಾಳಂ ನಟಿ ಶರಣ್ಯ ಶಶಿ ನಿಧನ