ಬೆಂಗಳೂರು: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರೆಸಬೇಕೋ, ಬೇಡವೋ ಎನ್ನುವುದು ಸೇರಿದಂತೆ ಕಠಿಣ ಮಾರ್ಗಸೂಚಿ ಪರಿಷ್ಕರಣೆ ಮಾಡುವ ಕುರಿತು ಇಂದು ಮಧ್ಯಾಹ್ನ ನಡೆಯಲಿರುವ ಕೋವಿಡ್ ಸಭೆಯಲ್ಲಿ ಸಾಧಕ - ಬಾಧಕಗಳನ್ನು ಎಲ್ಲ ಆಯಾಮಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೋವಿಡ್-19 ಸಭೆ ಕುರಿತು ಮಾತನಾಡಿದ ಅವರು, ಇಂದು ಮಧ್ಯಾಹ್ನ ಸಭೆ ನಡೆಯುತ್ತದೆ, ತಜ್ಞರ ಅಭಿಪ್ರಾಯ ಅಲ್ಲಿಯೇ ವ್ಯಕ್ತವಾಗಲಿದೆ. ಈಗಾಗಲೇ ಹಲವಾರು ರೀತಿಯ ಅಭಿಪ್ರಾಯಗಳು ಬಂದಿವೆ. ಹಲವಾರು ಸಂಘ ಸಂಸ್ಥೆಗಳು ತಮ್ಮ ವ್ಯವಹಾರಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ತಜ್ಞರು ಜನತೆಯ ಆರೋಗ್ಯ ದೃಷ್ಟಿಯಿಂದ ಅವರ ಅಭಿಪ್ರಾಯವನ್ನೂ ಇಂದು ಕೊಡಲಿದ್ದಾರೆ. ಹಲವಾರು ರಾಜಕೀಯ ನಾಯಕರು, ಕೇಂದ್ರ ಸಚಿವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಸೂಚನೆಗಳನ್ನು ನೀಡಿದ್ದಾರೆ.
ಅವೆಲ್ಲವನ್ನೂ ಗಮನದಲ್ಲಿಟ್ಟು ವಿಶೇಷವಾಗಿ ತಜ್ಞರ ವರದಿ, ಅಭಿಪ್ರಾಯ ಪಡೆದು ಮತ್ತು ಈಗಾಗಲೇ ಕೊರೊನಾ ಮೂರನೇ ಅಲೆ ಯಾವ ರೀತಿ ವರ್ತಿಸುತ್ತಿದೆ ಮುಂದೆ ಯಾವ ರೀತಿ ರೂಪಾಂತರ ತಾಳಬಹುದು, ಅದಕ್ಕೆ ಬೇಕಿರುವ ಆರೋಗ್ಯ ಸೌಕರ್ಯದ ಸಿದ್ಧತೆ, ಆರೋಗ್ಯ ಇಲಾಖೆಯ ಮೇಲೆ ಯಾವ ರೀತಿ ಒತ್ತಡ ಬೀಳಲಿದೆ, ಬರುವ ದಿನಗಳಲ್ಲಿ ಏನೆಲ್ಲಾ ಆಗಬಹುದು ಎನ್ನುವುದನ್ನು ಗಮನಿಸಿ ಎಲ್ಲ ಆಯಾಮಗಳಲ್ಲಿ ಯೋಚಿಸಿ ಇಂದು ಒಂದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಓದಿ: ಸಿಎಂ ನೇತೃತ್ವದಲ್ಲಿ ಇಂದು ಕೋವಿಡ್ ಸಭೆ: ವೀಕೆಂಡ್ ಕರ್ಫ್ಯೂ ಭವಿಷ್ಯ ನಿರ್ಧಾರ?
ವಾರಾಂತ್ಯದ ಕರ್ಫ್ಯೂ, ಶೇ.50 ರ ನಿಯಮಕ್ಕೆ ವಿನಾಯಿತಿ ನೀಡುವುದು ಸೇರಿ ಮಾರ್ಗಸೂಚಿ ಸಡಿಲಿಕೆ ಬಗ್ಗೆ ಸಭೆಯಲ್ಲಿ ವಿವರ ಅಭಿಪ್ರಾಯಗಳನ್ನು ಪಡೆದು ನಿರ್ಧರಿಸಲಾಗುತ್ತದೆ. ಈವರೆಗೆ ನಾವು ಕೈಗೊಂಡಿರುವ ಕ್ರಮಗಳಿಂದ ಆಗಿರುವ ಪರಿಣಾಮ, ಈಗ ವಿನಾಯಿತಿ ನೀಡಲು ಏನೆಲ್ಲ ಮಾಡಬಹುದು, ಒಂದು ವೇಳೆ ವಿನಾಯಿತಿ ನೀಡುವ ಕೆಲಸ ಮಾಡಿದರೆ ಏನೆಲ್ಲಾ ಆಗಲಿದೆ? ಎನ್ನುವುದನ್ನೆಲ್ಲಾ ವೈಜ್ಞಾನಿಕವಾಗಿ ನೋಡಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಕೊರೊನಾ ಪರಿಹಾರ ಕುರಿತು ನೀಡಿದ್ದ ಚೆಕ್ ಬೌನ್ಸ್ ಯಾದಗಿರಿಯಲ್ಲಿ ಆಗಿದೆ, ಸರ್ಕಾರದ ಗಮನಕ್ಕೂ ವಿಷಯ ಬಂದಿದೆ, ಕೂಡಲೇ ಅದನ್ನು ಸರಿಪಡಿಸಲಾಗುತ್ತದೆ. ಮತ್ತೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗುತ್ತದೆ ಎಂದು ಸಿಎಂ ತಿಳಿಸಿದರು.
ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ