ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗ್ತಿದೆ. ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದ ಜಿಲ್ಲಾವಾರು ವರದಿ ಕೇಳಿದ್ದೇನೆ. ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ.ನಗರದ ನಿವಾಸದ ಬಳಿ ಮಾತನಾಡಿದ ಅವರು, ಕೋವಿಡ್ ಜಾಸ್ತಿ ಆಗಿರುವ ಹಿನ್ನೆಲೆಯಲ್ಲಿ ವರದಿ ಕೇಳಿದ್ದೇನೆ. ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಜಿಲ್ಲಾವಾರು ಸಭೆ ಮಾಡಿ, ವರದಿ ಕೊಡ್ತೀನಿ ಅಂದಿದ್ದಾರೆ. ಅದರ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಕೆಲವು ನಿರ್ಣಯ ಕೈಗೊಳ್ಳುತ್ತೇವೆ. ಯಾರೂ ಗಾಬರಿ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಎರಡನೇ ಅಲೆಯ ಕೋವಿಡ್ ಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎರಡನೇ ಅಲೆಯಲ್ಲಿ ಕೋವಿಡ್ನಿಂದ ಮೃತರಾದವರ ಕುಟುಂಬಗಳಿಗೆ ಪರಿಹಾರ ಕೊಡಲಾಗಿದೆ. ಕೆಲವರಿಗೆ ಪರಿಹಾರ ಬಿಟ್ಟು ಹೋಗಿದ್ದರೆ ಅದನ್ನು ಕೊಡಲು ಕ್ರಮ ತಗೆದುಕೊಳ್ಳುತ್ತೇವೆ ಎಂದರು.
ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಮೂವರ ದುರ್ಮರಣ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ಬಗ್ಗೆ ಸಂಪೂರ್ಣ ವರದಿ ತರಿಸಿಕೊಂಡು ಪರಿಶೀಲಿಸುತ್ತೇನೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಕೊಡ್ತೇವೆ ಎಂದು ಸಿಎಂ ಘೋಷಿಸಿದರು.
ಅನುಭವ ಮಂಟಪ ಇದ್ದ ಜಾಗದ ಸಂರಕ್ಷಣೆ, ಸಂಶೋಧನೆಗೆ ಸ್ವಾಮೀಜಿಗಳಿಂದ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ನಿನ್ನೆ ಮನವಿ ಮಾಡಿದ್ದಾರೆ. ಕೆಲವು ದಾಖಲೆಗಳನ್ನೂ ಕೊಟ್ಟಿದ್ದಾರೆ. ದಾಖಲೆಗಳನ್ನು ಪುರಾತತ್ತ್ವ ಇಲಾಖೆ ಪರಿಶೀಲಿಸಲಿದೆ ಎಂದರು.
ಇದನ್ನೂ ಓದಿ: ನಿಮ್ಮಪ್ಪನ ಜೈಲಿಗೆ ಕಳುಹಿಸಿದ್ದು ಯಾರು? ಅಧಿಕಾರದಿಂದ ಇಳಿಯಲು ನೀನೇ ಕಾರಣ ಅಲ್ಲವೇ?.. ವಿಜಯೇಂದ್ರಗೆ ಕುಕ್ಕಿದ ಹಳ್ಳಿಹಕ್ಕಿ