ಬೆಂಗಳೂರು : ರಾಜಧಾನಿ ಬೆಂಗಳೂರು ನಗರವನ್ನು ಮಾದರಿ ನಗರವನ್ನಾಗಿ ಮೇಲ್ದರ್ಜೆಗೆ ಏರಿಸಲು ಅಗತ್ಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಸ್ಮಾರ್ಟ್ ಸಿಟಿ ಯೋಜನೆಯಲ್ಲದೆ, ನಗರೋತ್ಥಾನ, ಬಿಬಿಎಂಪಿ ಹಾಗೂ ಇತರೆ ಇಲಾಖೆಗಳ ಸಹಭಾಗಿತ್ವದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿ ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡಲು ಸರ್ಕಾರ ಸಿದ್ದವಿದೆ ಎಂದು ಹೇಳಿದರು.
ನಗರದ ಎರಡು ಪ್ರಮುಖ ಕಣಿವೆಗಳನ್ನು ಮಳೆ ಅನಾಹುತವಾದ ಸಂದರ್ಭದಲ್ಲಿ ಪರಿಶೀಲನೆ ನಡೆಸಿದ್ದು, 500 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ನಿರ್ಮಾಣ ಮಾಡಲು ವಿಸ್ತೃತ ಯೋಜನಾ ವರದಿ ಸಿದ್ದಪಡಿಸಲಾಗಿದೆ. ಬೆಂಗಳೂರು ಸ್ಮಾಟ್‍ಸಿಟಿ ಲಿಮಿಟೆಡ್‍ಗೆ ಒಂದು ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಎಲ್ಲ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಬೆಂಗಳೂರು ನಗರವು ಸ್ಮಾರ್ಟ್ ಸಿಟಿ ಯೋಜನೆಯ 3ನೇ ಸುತ್ತಿನಲ್ಲಿ ಆಯ್ಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50ರಷ್ಟು ಅನುದಾನ ಒದಗಿಸಲಿವೆ ಎಂದು ಹೇಳಿದರು. ನವೆಂಬರ್‌ವರೆಗೆ ಕೇಂದ್ರ ಸರ್ಕಾರದಿಂದ 243 ಕೋಟಿ ರೂ., ರಾಜ್ಯ ಸರ್ಕಾರದಿಂದ 250 ಕೋಟಿ ರೂ. ಸೇರಿದಂತೆ ಒಟ್ಟು 493 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅದರಲ್ಲೀಗ 414 ಕೋಟಿ ರೂ. ಖರ್ಚಾಗಿದೆ.
ಬೆಂಗಳೂರು ನಗರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 904.83 ಕೋಟಿ ರೂ. ಅಂದಾಜು ವೆಚ್ಚದಲ್ಲಿ 38 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹತ್ತು ಕಾಮಗಾರಿಗಳು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳುತ್ತವೆ. 96.65 ಕೋಟಿ ಮೌಲ್ಯದ 8 ಕಾಮಗಾರಿಗಳು ಹಾಗೂ 26.34 ಕೋಟಿ ರೂ. ಮೊತ್ತದ ಒಂದು ರಸ್ತೆ ಕಾಮಗಾರಿಯು ಪೂರ್ಣಗೊಂಡಿದೆ. 550 ಕೋಟಿ ರೂ. ವೆಚ್ಚದಲ್ಲಿ 16 ರಸ್ತೆ ಕಾಮಗಾರಿಗಳು ಕೈಗೊಳ್ಳಲಾಗಿದೆ. 60 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್.ಮಾರುಕಟ್ಟೆ ಅಭಿವೃದ್ಧಿ, ಕಬ್ಬನ್‍ಪಾರ್ಕ್, ಎಲೆಕ್ಟ್ರಿಕ್ ಬಸ್‍ಗಳು ಕೂಡ ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿವೆ ಎಂದು ವಿವರಿಸಿದರು.
ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ ಅಷ್ಟೇ ಅಲ್ಲ, ಸೆಂಟ್ರಲ್ ಡಿಸ್ಟ್ರಿಕ್ ಮಾದರಿಯಲ್ಲಿ ನಗರದ ಬೇರೆ ಬೇರೆ ಕಡೆ ಅಭಿವೃದ್ಧಿ ಮಾಡಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿ, ಸಂಚಾರ ಸಿಗ್ನಲ್ ಬದಲಾವಣೆ, ಪೊಲೀಸ್ ಡ್ರೆಸ್ ಕೂಡ ಸೇರುತ್ತದೆ. ಕೆ.ಜೆ. ಜಾರ್ಜ್ ಅವರು ಬೆಂಗಳೂರು ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವವಿದೆ.
ಅದರ ಲಾಭ ಪಡೆಯಲಾಗುವುದು. ಹಣಕಾಸು ಮತ್ತು ಬೆಂಗಳೂರಿಗೆ ನೇರ ಸಂಬಂಧವಿದೆ. ಅದೇ ರೀತಿ ಆದಾಯ ಮತ್ತು ಖರ್ಚಿನಲ್ಲೂ ಸಂಬಂಧವಿದೆ. ಹೀಗಾಗಿ, ತಾವು ಹೆಚ್ಚಿನ ಸಮಯ ಕೊಡುತ್ತಿರುವುದಾಗಿ, ಬೆಂಗಳೂರಿಗೆ ಉಸ್ತುವಾರಿ ಸಚಿವರನ್ನು ನೇಮಿಸಬೇಕೆಂಬ ಜಾರ್ಜ್ ಅವರ ಮತ್ತೊಂದು ಪ್ರಶ್ನೆಗೆ ಸಿಎಂ ಉತ್ತರಿಸಿದರು.
ಇ-ಕ್ರಮ ಪೋರ್ಟಲ್ ವ್ಯಾಪ್ತಿಗೆ 19 ಲಕ್ಷ ಜನ : ಇ-ಕ್ರಮ ಪೋರ್ಟಲ್ ವ್ಯಾಪ್ತಿಗೆ 19 ಲಕ್ಷ ಜನರನ್ನು ತರಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಸನಗೌಡ ಆರ್.ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿದರು. ಒಂದು ವರ್ಷದ ಒಟ್ಟು ಉತ್ಪನ್ನದಲ್ಲಿ ಶೇ.10ರಷ್ಟನ್ನು ಕಾರ್ಮಿಕರ ಕಲ್ಯಾಣಕ್ಕೆ ನೀಡಬಹುದಾಗಿದೆ. ಕಾರ್ಮಿಕ ಇಲಾಖೆಯಲ್ಲಿ ಎಲ್ಲ ಕಾರ್ಮಿಕರನ್ನು ನೋಂದಣಿ ಮಾಡುವ ವ್ಯವಸ್ಥೆ ಇಲ್ಲ.
ಆದರೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 26 ,73,298 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಣಿಯಾಗಿದ್ದಾರೆ. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ 8,40,561 ಕಾರ್ಮಿಕರು ನೋಂದಾಯಿತರಾಗಿದ್ದಾರೆ. ಪ್ರತಿ 5 ವರ್ಷಗಳಿಗೊಮ್ಮೆ ಕನಿಷ್ಟ ವೇತನವನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ, ಕಾರ್ಮಿಕರಿಗೆ ವೈದ್ಯಕೀಯ ನೆರವು, ಅಪಘಾತ ಧನ ಸಹಾಯ ಮೊದಲಾದ ಸಹಾಯಗಳನ್ನು ಒದಗಿಸಲಾಗುತ್ತಿದೆ. ಕೋವಿಡ್ 2ನೇ ಅಲೆಯ ವಿಶೇಷ ಪ್ಯಾಕೇಜ್‍ನಡಿ 11,82,307 ಅರ್ಹ ಅರ್ಜಿದಾರರಿಗೆ ತಲಾ ₹2,000ದಂತೆ 236.46 ಕೋಟಿ ರೂ. ಪರಿಹಾರವನ್ನು ಮಂಡಳಿ ಮೂಲಕ ನೀಡಲಾಗಿದೆ ಎಂದು ತಿಳಿಸಿದರು.