ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬೆಂಗಳೂರು ಜಿಲ್ಲಾ ಉಸ್ತುವಾರಿ ಹಂಚಿಕೆ ಕಗ್ಗಂಟಾಗಿಯೇ ಉಳಿದಿದೆ. ಪಕ್ಷದ ನಾಯಕರಲ್ಲಿ ತೀವ್ರ ಪೈಪೋಟಿ ಇರುವ ಹಿನ್ನಲೆಯಲ್ಲಿ ಸಚಿವರ ಬದಲು ಮುಖ್ಯಮಂತ್ರಿಗಳೇ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಇರಿಸಿಕೊಂಡಿದ್ದು, ಬದಲಾದ ರಾಜಕೀಯ ಚಿತ್ರಣದಿಂದಾಗಿ ಈಗ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಚಿಂತನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ್ದಾರೆ.
2019 ರಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದಲೇ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇರಿಸಿಕೊಂಡಿದ್ದರು. ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರವೂ ಅವರೇ ಉಸ್ತುವಾರಿ ಸಚಿವ ಸ್ಥಾನ ಇರಿಸಿಕೊಂಡಿದ್ದಾರೆ. ತವರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ತಲೆದೂರಿದ್ದ ತೀವ್ರ ಪೈಪೋಟಿ ನಿಯಂತ್ರಿಸಲು ಆಯಾ ಜಿಲ್ಲೆಯ ಸಚಿವರ ಅವರ ಜಿಲ್ಲೆಗೆ ಉಸ್ತುವಾರಿ ಆಗುವಂತಿಲ್ಲ ಎನ್ನುವ ನಿಯಮ ಮಾಡಿ ಹೊರ ಜಿಲ್ಲೆಗಳಿಗೆ ಸಚಿವರನ್ನು ಉಸ್ತುವಾರಿ ಆಗಿ ನೇಮಿಸಲಾಗಿದೆ.
ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಡಳಿತಾತ್ಮಕ ಜವಾಬ್ದಾರಿ ಹೆಚ್ಚಾಗಿದ್ದು, ಬೆಂಗಳೂರು ನಗರ ಜಿಲ್ಲೆಯ ಕಡೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಇಡೀ ರಾಜ್ಯದ ಜವಾಬ್ದಾರಿ ಹೊಂದಿರುವ ಸಿಎಂ, ರಾಜ್ಯಮಟ್ಟದ ಆಡಳಿತಾತ್ಮಕ ಕರ್ತವ್ಯ ನಿಭಾಯಿಸುತ್ತಿದ್ದಾರೆ.
ಚುನಾವಣಾ ವರ್ಷವಾಗಿರುವ ಹಿನ್ನಲೆಯಲ್ಲಿ ಬಜೆಟ್ ಅನುಷ್ಠಾನಕ್ಕೆ ಸರಣಿ ಸಭೆ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ, ಜಿಲ್ಲಾ ಪ್ರವಾಸ, ಪಕ್ಷದ ಸಭೆಗಳು ಹೆಚ್ಚಾಗಿದ್ದು ಬೆಂಗಳೂರು ನಗರ ಜಿಲ್ಲೆ ಅಭಿವೃದ್ಧಿಗೆ ಗಮನ ಹರಿಸಲು ಸಾಧ್ಯವಾಗದಂತಾಗಿದೆ.
ಮಳೆಯಿಂದಾಗಿ ಸಂಭವಿಸಿದ ಹಾನಿ ನಂತರವೇ ಇದು ಸಿಎಂ ಗಮನಕ್ಕೆ ಬಂದಿದ್ದು, ಬೆಂಗಳೂರಿಗೆ ಹೆಚ್ಚಿನ ಗಮನ ಹರಿಸಬೇಕು ಅಥವಾ ಇತರ ಕೆಲ ಸಚಿವರಿಗೂ ಕೆಲ ನಿರ್ದಿಷ್ಟ ಜವಾಬ್ದಾರಿ ಹಂಚಿಕೆ ಮಾಡಬೇಕು ಎನ್ನುವ ಚಿಂತನೆ ಮಾಡಿದ್ದಾರೆ.
ಸಚಿವರಿಗೇ ವಲಯವಾರು ಜವಾಬ್ದಾರಿ?: ಆರ್.ಅಶೋಕ್, ಡಾ.ಅಶ್ವತ್ಥ ನಾರಾಯಣ್, ವಿ.ಸೋಮಣ್ಣ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅದರ ಜೊತೆಗೆ ವಲಸಿಗ ಸಚಿವರೂ ಕಣ್ಣಿಟ್ಟಿದ್ದಾರೆ. ಬೈರತಿ ಬಸವರಾಜ್, ಮುನಿರತ್ನ ಶತ ಪ್ರಯತ್ನ ನಡೆಸುತ್ತಿದ್ದಾರೆ. ಯಾರಿಗೇ ಉಸ್ತುವಾರಿ ಸ್ಥಾನ ನೀಡಿದರೂ ಅಸಮಾಧಾನ ಸ್ಫೋಟವಾಗುವುದು ಖಚಿತವಾಗಿದೆ. ಚುನಾವಣಾ ವರ್ಷವಾಗಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅತೃಪ್ತಿ ಸೃಷ್ಟಿಯಾದರೆ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಹಾಗಾಗಿ ಉಸ್ತುವಾರಿ ಬದಲಾವಣೆ ಮಾಡದೇ ಜವಾಬ್ದಾರಿ ಹಂಚಿಕೆ ಮಾಡುವುದು ಸೂಕ್ತ ಎನ್ನುವ ಚಿಂತನೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಎಂಟು ವಲಯಗಳಿದ್ದು, ಏಳು ಸಚಿವರಿದ್ದಾರೆ. ಪಾಲಿಕೆ ಚುನಾವಣೆ ನಡೆಯದ ಕಾರಣಕ್ಕೆ ಕಾರ್ಪೊರೇಟರ್ಗಳೂ ಇಲ್ಲದಂತಾಗಿದೆ. ಹಾಗಾಗಿ ಜನರ ಕಷ್ಟ ಆಲಿಸಲು ಸಚಿವರಿಗೇ ವಲಯವಾರು ಜವಾಬ್ದಾರಿ ನೀಡಿ ಮಳೆಹಾನಿ ಪರಿಹಾರ ಕಾರ್ಯಾಚರಣೆ, ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಇತ್ಯಾದಿಗಳ ನಿರ್ವಹಣೆ ಮಾಡುವ ಜವಾಬ್ದಾರಿ ಹಂಚುವ ತಂತ್ರ ಹೆಣೆಯುತ್ತಿದ್ದಾರೆ.
ಈ ಕುರಿತು ಪರೋಕ್ಷವಾಗಿ ಸುಳಿವು ನೀಡಿರುವ ಸಿಎಂ, ಬೆಂಗಳೂರು ಮೊದಲು ಮಹಾನಗರಪಾಲಿಕೆ ಆಯಿತು. ನಂತರ ಈಗ ಬಿಬಿಎಂಪಿ ಆಗಿದೆ. ಬೆಂಗಳೂರು ನಗರ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಉಸ್ತುವಾರಿ ಸಚಿವರ ಅಗತ್ಯವಿದೆ. ಇದರ ಅರಿವು ನಮಗಿದೆ. ಹಾಗಾಗಿಯೇ ಈ ಸಂಬಂಧ ಈಗಾಗಲೇ ಒಂದು ಸುತ್ತು ಸಭೆ ಮಾಡಿದ್ದೇನೆ. ಇಡೀ ಮಹಾನಗರದ ಆಡಳಿತ ವಿನ್ಯಾಸವನ್ನೇ ಮತ್ತಷ್ಟು ವಿಕೇಂದ್ರೀಕರಣ ಮಾಡಬೇಕಿದೆ.
ಆ ಸಂದರ್ಭದಲ್ಲಿ ಆಡಳಿತಾತ್ಮಕವಾಗಿ ಮತ್ತು ಪ್ರಜಾಪ್ರತಿನಿಧಿ ಜವಾಬ್ದಾರಿಯನ್ನು ಸಮಗ್ರವಾಗಿ ಚಿಂತನೆ ಮಾಡಿ ಆದಷ್ಟು ಬೇಗ ಒಂದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ ತೀರ್ಪು ಪಾಲಿಸಬೇಕು, ನಾವು ಚುನಾವಣೆಗೆ ಸಿದ್ದರಿದ್ದೇವೆ: ಸಿಎಂ ಬೊಮ್ಮಾಯಿ