ಬೆಂಗಳೂರು : ಕೊರೊನಾ ಮೂರನೇ ಅಲೆ ತಡೆಯಲು ವ್ಯಾಕ್ಸಿನ್ ಒಂದೇ ಪರಿಹಾರವಾಗಿದೆ. ಗ್ರಾಮೀಣ ಭಾಗದಲ್ಲಿ ಲಸಿಕೆ ನೀಡಲು ನಾರಾಯಣ ಹೆಲ್ತ್ ಸಹಯೋಗದೊಂದಿಗೆ ವೋಲ್ವೋ ಸಂಸ್ಥೆ ಲಸಿಕಾ ವಾಹನ ತಯಾರಿಸಿದ್ದು, ಹಳ್ಳಿ ಹಳ್ಳಿಗಳಿಗೆ ತೆರಳಿ ಕೋವಿಡ್ ಲಸಿಕೆ ನೀಡುವ ಕಾರ್ಯದಲ್ಲಿ ತೊಡಗಲಿದೆ.
ನಾರಾಯಣ ಹೆಲ್ತ್ ಸಹಯೋಗದೊಂದಿಗೆ ವೋಲ್ವೋ ಸಂಸ್ಥೆ ಸಿದ್ಧಪಡಿಸಿರುವ ಉಚಿತ ಕೋವಿಡ್ ಲಸಿಕಾ ವಾಹನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ವ್ಯಾಕ್ಸಿನ್ ಆನ್ ವ್ಹೀಲ್ ಹೆಸರಿನ ಲಸಿಕೆ ನೀಡುವ ಬಸ್ಸನ್ನು ಸಿಎಂ ವೀಕ್ಷಿಸಿ, ಲಸಿಕೆ ನೀಡುವ ಸ್ಥಳ, ಪ್ರಥಮ ಚಿಕಿತ್ಸೆ ಸೌಲಭ್ಯ ಸೇರಿದಂತೆ ಸಂಪೂರ್ಣ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಬಸ್ಸಿನಲ್ಲಿನ ಸೌಲಭ್ಯಗಳು ಹಾಗೂ ಹಳ್ಳಿಗಳಿಗೆ ತೆರಳಿ ವ್ಯಾಕ್ಸಿನ್ ನೀಡುವ ಉದ್ದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸ್ಸಿನ ವಿಶೇಷತೆಗಳು :
ಲಸಿಕಾ ಬಸ್ಸುನಲ್ಲಿ ಕೋವಿಡ್ ವ್ಯಾಕ್ಸಿನ್ ಸಂರಕ್ಷಿಸಲು ಬೇಕಾದ ವ್ಯಾಕ್ಸಿನ್ ರೆಫ್ರಿಜರೇಟರ್ಗಳನ್ನು ಅಳವಡಿಸಲಾಗಿದೆ. ನಿತ್ಯ ಕೊಡಬೇಕಿರುವ ವ್ಯಾಕ್ಸಿನ್ ವಯಲ್ಸ್ ಅನ್ನು ಅದರಲ್ಲಿ ಸಂಗ್ರಹಿಸಲಿದ್ದು, ಕನಿಷ್ಠ 1 ವಯಲ್ಸ್ಗೆ ಆಗುವಷ್ಟು ಜನರು ಬಂದಾಗ ಮಾತ್ರ ರೆಫ್ರಿಜಿರೇಟರ್ನಿಂದ ವ್ಯಾಕ್ಸಿನ್ ಹೊರತೆಗೆದು ನೀಡಲಾಗುತ್ತದೆ. ಕನಿಷ್ಠ 10 ಜನರಿದ್ದಾಗ ಮಾತ್ರ ವಯಲ್ಸ್ ತೆರೆದು ಲಸಿಕೆ ನೀಡಲಾಗುತ್ತದೆ.
ಬಸ್ಸಿನ ಒಳಭಾಗದಲ್ಲಿ ವಿಶಾಲವಾದ ಸ್ಥಳಾವಕಾಶವಿದ್ದು, ನಾಲ್ಕು ವ್ಯಾಕ್ಸಿನೇಷನ್ ಕೇಂದ್ರ ಇರಲಿದೆ. ಏಕಕಾಲಕ್ಕೆ ನಾಲ್ವರು ಲಸಿಕೆ ಪಡೆಯಬಹುದಾಗಿದೆ. ಇನ್ನು, ಲಸಿಕೆ ಪಡೆದ ವ್ಯಕ್ತಿಗಳಿಗೆ ಅಡ್ಡ ಪರಿಣಾಮ ಕಾಣಿಸಿಕೊಂಡಲ್ಲಿ ಪ್ರಥಮ ಚಿಕಿತ್ಸೆ ನೀಡಲು ಎರಡು ಬೆಡ್ ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ಸಿಬ್ಬಂದಿಯ ಕ್ಯಾಬಿನ್ ಕೂಡ ಬಸ್ಸಿನಲ್ಲಿದೆ. ವೈದ್ಯಕೀಯ ಸಿಬ್ಬಂದಿ, ಲಸಿಕಾ ಸಿಬ್ಬಂದಿಯ ಅನುಕೂಲಕ್ಕಾಗಿ ಆಹಾರ ಬಿಸಿ ಮಾಡಲು ಓವನ್ ಸೌಲಭ್ಯ ಕಲ್ಪಿಸಿದ್ದು, ಕೆಮಿಕಲ್ ಟಾಯ್ಲೆಟ್ ಕೂಡ ಅಳವಡಿಸಲಾಗಿದೆ.
ಟಾರ್ಗೆಟ್ :
ಪ್ರತಿದಿನ ಕನಿಷ್ಠ 1-2 ಸಾವಿರ ಡೋಸೇಜ್ ಲಸಿಕೆ ನೀಡಬೇಕೆನ್ನುವ ಗುರಿಯನ್ನು ಹೊಂದಲಾಗಿದೆ. ಮೂರನೇ ಅಲೆ ವ್ಯಾಪಕ ಅಗುವ ಮೊದಲೇ ಸಾಧ್ಯವಾದಷ್ಟು ಪ್ರಮಾಣದಲ್ಲಿ ಲಸಿಕೆ ನೀಡಬೇಕು ಎನ್ನುವ ಕಾರಣಕ್ಕಾಗಿ ಹೆಚ್ಚು ಹೆಚ್ಚು ಪ್ರಮಾಣದ ಲಸಿಕೆ ನೀಡುವ ಗುರಿಯೊಂದಿಗೆ ವ್ಯಾಕ್ಸಿನ್ ಆನ್ ವ್ಹೀಲ್ ಬಸ್ ಹಳ್ಳಿ ಹಳ್ಳಿಗಳನ್ನು ಸುತ್ತಲಿದೆ.
ಎಲ್ಲಿ ಲಸಿಕೆ :
ನಗರ, ಪಟ್ಟಣ ಪ್ರದೇಶಗಳಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಲಸಿಕೆ ದಾಸ್ತಾನು ಕೂಡ ಉತ್ತಮವಾಗಿ ಆಗುತ್ತಿದೆ. ಆದರೆ, ಉತ್ತರ ಕರ್ನಾಟಕ ಭಾಗದ ಹಳ್ಳಿಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಅಲ್ಲಿನ ಲಸಿಕಾ ಕೇಂದ್ರದಲ್ಲಿ ಸರಿಯಾಗಿ ಲಸಿಕೆ ಸಿಗದೆ ಇರುವುದು ಇದಕ್ಕೆ ಮುಖ್ಯ ಕಾರಣ. ಹಾಗಾಗಿ, ಲಸಿಕೆ ಕೊರತೆ ಇರುವ ಹಳ್ಳಿಗಳನ್ನೇ ಆಯ್ಕೆ ಮಾಡಿಕೊಂಡು ಅಲ್ಲಿಗೆ ತೆರಳಿ ಗ್ರಾಮ ಗ್ರಾಮಗಳಲ್ಲಿ ಲಸಿಕೆ ನೀಡುವ ಮೂಲಕ ಹಳ್ಳಿಗಳನ್ನು ಕೋವಿಡ್ ವ್ಯಾಕ್ಸಿನೇಟೆಟ್ ವಿಲೇಜ್ಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ.
ಫ್ರೀ ವ್ಯಾಕ್ಸಿನ್ :
ನಾರಾಯಣ ಹೆಲ್ತ್ ಮತ್ತು ವೋಲ್ವೋ ಸಹಭಾಗಿತ್ವದ ವ್ಯಾಕ್ಸಿನ್ ಆನ್ ವ್ಹೀಲ್ ಸಂಪೂರ್ಣ ಉಚಿತವಾಗಿ ಜನರಿಗೆ ವ್ಯಾಕ್ಸಿನ್ ನೀಡಲಿದೆ. ಕೋವಿಡ್ ಲಸಿಕೆಯನ್ನು ಜನರಿಗೆ ಉಚಿತವಾಗಿ ನೀಡಲಾಗುತ್ತದೆ. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ನೀಡಲಾಗುತ್ತದೆ. ಲಸಿಕೆ ಪಡೆಯದವರಿಗೂ ಮೊದಲ ಡೋಸ್ ಲಸಿಕೆ ನೀಡಲಾಗುತ್ತದೆ. ಲಸಿಕಾ ಬಸ್ಸಿನಲ್ಲಿ ಮೊದಲ ಡೋಸ್ ವ್ಯಾಕ್ಸಿನ್ ತೆಗೆದುಕೊಂಡವರು ಬೇರೆ ಎಲ್ಲಿ ಬೇಕಾದರೂ ಎರಡನೇ ಡೋಸ್ ಪಡೆಯಬಹುದಾಗಿದ್ದು, ಆತಂಕವಿಲ್ಲದೆ ಜನರು ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ.
ಈ ಕುರಿತು ಮಾಹಿತಿ ನೀಡಿದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ, ಬೆಂಗಳೂರಿನ ಜನತೆ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಗ್ರಾಮೀಣ ಭಾಗದ ರೀಮೋಟ್ ಏರಿಯಾಗಳು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಲಸಿಕೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ಹೀಗಾಗಿ, ಅಂತಹ ಸ್ಥಳಗಳ ಹಳ್ಳಿ ಭಾಗಗಳಿಗೆ ನಮ್ಮ ವಾಹನ ತೆರಳಿ ಲಸಿಕೆ ನೀಡಲಿದೆ ಎಂದರು.
ದಿನನಿತ್ಯ 1 ರಿಂದ 2 ಸಾವಿರ ಲಸಿಕೆ ನೀಡುವ ಗುರಿ ಇದೆ. ಇದು ನಾವು ಉಚಿತವಾಗಿ ನೀಡುತ್ತಿರುವ ಲಸಿಕೆಯಾಗಿದೆ. ಸದ್ಯ ಕೆಲವೆಡೆ ಲಸಿಕೆ ಕೊರತೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ, ಸದ್ಯದಲ್ಲೇ ಲಸಿಕೆ ಅಭಾವ ಕಡಿಮೆಯಾಗಲಿದೆ. ಮುಂದಿನ ಕೆಲ ವಾರಗಳಲ್ಲಿ ನನ್ನ ಅಭಿಪ್ರಾಯದ ಪ್ರಕಾರ ಬೇಕಾದಷ್ಟು ಲಸಿಕೆ ಸಿಗಲಿದೆ ಎಂದರು.
ಶಾಲೆ ಆರಂಭಕ್ಕೆ ವರದಿ :
1 ರಿಂದ 8ನೇ ತರಗತಿ ಶಾಲೆ ಆರಂಭದ ಬಗ್ಗೆ ಈಗಾಗಲೇ ಸರ್ಕಾರಕ್ಕೆ ತಿಳಿಸಿದ್ದೇವೆ. ಹಂತ-ಹಂತವಾಗಿ ಶಾಲೆ ಆರಂಭಕ್ಕೆ ಸಲಹೆ ನೀಡಿದ್ದೇವೆ. ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿದೆ. ಈಗ 9 ರಿಂದ 12ನೇ ತರಗತಿಯವರೆಗೆ ಆರಂಭ ಮಾಡಿದ್ದಾರೆ. ಇದನ್ನ ನೋಡಿಕೊಂಡು ಸರ್ಕಾರ ಪ್ರಾಥಮಿಕ ಶಾಲೆಗಳನ್ನು ಆರಂಭ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎಂದರು.
ಜನ ಸೇರುವ ಹಬ್ಬ ಬೇಡ :
ಗಣೇಶ ಹಬ್ಬ ಮಾತ್ರ ಅಲ್ಲ, ಗುಂಪು ಸೇರಿ ಯಾವುದೇ ಹಬ್ಬ ಮಾಡಿದರೂ ಸಮಸ್ಯೆ ಆಗುತ್ತದೆ. ಹಾಗಾಗಿ, ಎಚ್ಚರಿಕೆಯಿಂದ ಇರಬೇಕು. ಗಣೇಶೋತ್ಸವಕ್ಕೆ ಅನುಮತಿ ಕೊಡುವುದು, ಬಿಡುವುದು ಸರ್ಕಾರಕ್ಕೆ ಸೇರಿದ್ದು, ನಾವೇನೂ ಹೇಳುವುದಕ್ಕೆ ಆಗಲ್ಲ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಹೇಳಿದರು.