ಬೆಂಗಳೂರು: ದೇವರು ಎಲ್ಲವನ್ನೂ ಕೊಟ್ಟಾಗ ಅದರ ಮಹತ್ವ ತಿಳಿಯೋಲ್ಲ, ಕೊರತೆಯಾದಾಗಲೇ ಅದರ ಮಹತ್ವ ತಿಳಿಯಲು ಸಾಧ್ಯ. ಅಂತಹದ್ದೇ ಫಲಶೃತಿ ಜಯನಗರದ ಟೀ ಬ್ಲಾಕ್ ನಲ್ಲಿರುವ ಕೆಎಸ್ಆರ್‌ಟಿಸಿ ಆಸ್ಪತ್ರೆ. ಕೊರತೆಯಾದಾಗ ಹುಟ್ಟಿಕೊಂಡಿರುವ ಆಸ್ಪತ್ರೆ ಇದಾಗಿದ್ದು, ನಿರಂತರವಾಗಿ ಜನಸೇವೆ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕೆಎಸ್ಆರ್‌ಟಿಸಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಸಿಎಂ, ಬಡವರಿಗೆ-ಸಂಕಷ್ಟದಲ್ಲಿ ಇರುವವರಿಗೆ ಅನೇಕರು ಸಹಾಯ ಮಾಡಿದ್ದಾರೆ. ಹಾಗಾಗಿ ಅಚ್ಚುಕಟ್ಟಾಗಿ ಆಸ್ಪತ್ರೆ ನಡೆಸಿಕೊಂಡು ಹೋಗುವ ಕೆಲಸ ಆಗಬೇಕು ಎಂದು ಕಿವಿಮಾತು ಹೇಳಿದರು.
ಕೆಎಸ್ಆರ್ ಟಿಸಿ ಆಸ್ಪತ್ರೆ ಪುನರ್ ನಿರ್ಮಾಣವಾಗಿರುವುದು ಸಂತಸ ತಂದಿದೆ. ಶಾಸಕರು, ಸರ್ಕಾರ, ಬಿಬಿಎಂಪಿ, ಕಾರ್ಪೊರೇಟ್ ಸೆಕ್ಟರ್ ಎಲ್ಲರೂ ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಇದು ತೋರಿಸಿಕೊಟ್ಟಿದೆ. ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿ ಅದೆಷ್ಟೋ ದುಡಿಯುವ ವರ್ಗ ಕೈಚೆಲ್ಲಿ ಕೂತಿದೆ. ಸಾಂಕ್ರಾಮಿಕದಿಂದ ಸಾವು-ನೋವು ಸಂಭವಿಸಿದ್ದರೂ ಮತ್ತೊಂದು ಕಡೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿದೆ ಎಂದರು.
ಕೊರೊನಾ ಮೊದಲೆರಡು ಅಲೆ ಪಾಠ ಕಲಿಸಿದೆ: ಕೊರೊನಾ ಮೊದಲೆರಡು ಅಲೆ ಎಲ್ಲರಿಗೂ ಸಾಕಷ್ಟು ಪಾಠ ಕಲಿಸಿದೆ. ಮೂರನೇ ಅಲೆ ಬರಬಾರದು, ಬಂದರೂ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ನಾವು ದಿನನಿತ್ಯ ಉಸಿರಾಡುತ್ತೇವೆ ಆದರೆ ಆಕ್ಸಿಜನ್ ಮಹತ್ವ ನಮ್ಗೆ ಗೊತ್ತಿಲ್ಲ, ಕೋವಿಡ್ ಸಮಯದಲ್ಲಿ ಆಕ್ಸಿಜನ್ ಸಿಗದೇ ಇದ್ದಾಗ ಅದರ ಮಹತ್ವ ಅರಿವಾಯ್ತು. ಹಾಗೆಯೇ ಆಹಾರ ಪದ್ಧತಿಯಲ್ಲೂ ಪೌಷ್ಟಿಕಾಹಾರ ಸೇವನೆ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ ಎಂದು ಸಿಎಂ ಹೆಲ್ತ್ ಟಿಪ್ಸ್ ಕೊಟ್ಟರು.
ತೇಜಸ್ವಿಗೆ ಪ್ರಶಂಸೆ: ನಮ್ಮ ಸಂಸತ್ ಸದಸ್ಯರು ಬಹಳ ಆಸಕ್ತಿ ವಹಿಸುತ್ತಿದ್ದಾರೆ. ಯುವ ಸಂಸದನನ್ನು ಆಯ್ಕೆ ಮಾಡಿದರೆ ಏನು ಲಾಭ ಎನ್ನುವುದಕ್ಕೆ ತೇಜಸ್ವಿ ಸೂರ್ಯ ಉದಾಹರಣೆ. ಕ್ಷೇತ್ರದ ಅಭಿವೃದ್ಧಿಗೆ ಅವರು ಸಾಕಷ್ಟು ಕೊಡುಗೆ ಕೊಡುತ್ತಿದ್ದಾರೆ. ಕಾರ್ಪೊರೇಟ್ ವಲಯದ ರಾಯಭಾರಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಆರೋಗ್ಯ ಸೇವೆಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ: ಸಿಎಂ ಬೊಮ್ಮಾಯಿ