ಬೆಂಗಳೂರು : ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ಅರಣ್ಯ ಮತ್ತು ವನ್ಯಜೀವಿ ರಕ್ಷಣೆಗೆ ಪ್ರಾಣಾರ್ಪಣೆ ಮಾಡಿದ ಇಲಾಖೆಯ ಹುತಾತ್ಮ ಅಧಿಕಾರಿ, ಸಿಬ್ಬಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಗೌರವ ನಮನ ಸಲ್ಲಿಸಿದರು.
ಮಲ್ಲೇಶ್ವರ ಅರಣ್ಯ ಭವನದ ಬಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದರು. ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಾಡಿನ ನಾಶ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಮುಂದಿನ ಬಜೆಟ್ನಲ್ಲಿ ಪರಿಸರ ವೃದ್ಧಿಗೆ ಯೋಜನೆ ತರುವ ಮೂಲಕ ಕಾಡನ್ನು ಬೆಳೆಸಬೇಕಾಗಿದೆ. ಇದೇ ಮೊದಲ ಬಾರಿಗೆ ನಾವು ಪರಿಸರದಲ್ಲಿ ಉಂಟಾಗಿರುವ ನಷ್ಟ ತಪ್ಪಿಸಲು ಯೋಜನೆ ತರುತ್ತಿದ್ದೇವೆ ಎಂದರು.

ಹಿರಿಯರು ರಕ್ಷಣೆ ಮಾಡಿಕೊಂಡು ಬಂದಿರುವ ಅರಣ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಅವರಲ್ಲೂ ಪರಿಸರ ಬಗ್ಗೆ ಜಾಗೃತಿ ಮೂಡಿಸಬೇಕು. ಕಾಡನ್ನು ಉಳಿಸಿ ಬೆಳೆಸಲು ಸರ್ಕಾರ ಅಗತ್ಯ ಕ್ರಮವಹಿಸಲಿದೆ. ಆನೆ ಕಾರಿಡಾರ್ಗಳನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು.
ಅರಣ್ಯ ಸಂರಕ್ಷಣೆ ಮಾಡೋರಷ್ಟೇ ಅಲ್ಲ. ಪ್ರಾಣ ಕಳೆದುಕೊಂಡ ಸಾಮಾನ್ಯ ಜನರೂ ಹುತಾತ್ಮರೆ. ಮಾಜಿ ಸಿಎಂ ಯಡಿಯೂರಪ್ಪನವರು ಕರ್ತವ್ಯದಲ್ಲಿದ್ದಾಗ ಪ್ರಾಣ ಕಳೆದುಕೊಂಡ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ 30 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಅದುವರೆಗೆ ಪರಿಹಾರ ಮೊತ್ತ ಕಮ್ಮಿ ಇತ್ತು.
ಈ ವೇಳೆ ಯಡಿಯೂರಪ್ಪ ಅವರಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಪಡೆ ಮುಖ್ಯಸ್ಥ ಸಂಜಯ್ ಮೋಹನ್ ಸೇರಿ ಇತರೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಓದಿ: ಸೈಕ್ಲಿಂಗ್ ಸ್ಪರ್ಧೆಯಲ್ಲೇ ಹೃದಯಾಘಾತ: ಹುಬ್ಬಳ್ಳಿಯ ಸೈಕ್ಲಿಸ್ಟ್ ವಿಧಿವಶ