ಬೆಂಗಳೂರು: ನಾಳೆ ನವದೆಹಲಿಗೆ ತೆರಳುತ್ತಿದ್ದು, ಅಂತಾರಾಜ್ಯ ನೀರಾವರಿ ಯೋಜನೆಗಳ ವಿವಾದ ಸಂಬಂಧ ಕಾನೂನು ತಂಡದೊಂದಿಗೆ ದೆಹಲಿಯಲ್ಲಿ ಸಭೆ ನಡೆಸುತ್ತೇವೆ. ಇದೇ ವೇಳೆ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿ ಸಂಬಂಧ ವರಿಷ್ಠರ ಜೊತೆ ಮಾತುಕತೆ ನಡೆಸಿ ಮುಂದುವರೆಯಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರದ ಆರೋಗ್ಯ, ಆರ್ಥಿಕ, ಜಲಶಕ್ತಿ, ಕೃಷಿ, ರಕ್ಷಣಾ ಸಚಿವರ ಸಮಯಾವಕಾಶ ಕೇಳಿದ್ದೇನೆ. ನೀರಾವರಿಗೆ ಸಂಬಂಧಿಸಿ ಅಂತಾರಾಜ್ಯ ಜಲ ವಿವಾದಗಳ ಕುರಿತು ಕಾನೂನು ತಜ್ಞರ ಜತೆ ದೆಹಲಿಯಲ್ಲಿ ಸಭೆ ಮಾಡುತ್ತೇನೆ. ಕರ್ನಾಟಕ ಪ್ರತಿನಿಧಿಸುವ ಹಿರಿಯ ವಕೀಲರೂ ಸಭೆಯಲ್ಲಿ ಇರುತ್ತಾರೆ. ಈಗಿರುವ ಜಲವಿವಾದಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಯಾವ ರೀತಿ ಮುಂದುವರೆಯಬೇಕು ಅಂತ ಚರ್ಚೆ ಮಾಡುತ್ತೇವೆ. ಆಗಸ್ಟ್ 25ರ ಸಂಜೆ ದೆಹಲಿಗೆ ಹೋಗಿ 26ರಂದು ಈ ಎಲ್ಲ ಸಭೆ ಮಾಡುವುದಾಗಿ ದೆಹಲಿ ಪ್ರವಾಸದ ಕುರಿತು ವಿವರ ನೀಡಿದರು.
ಸಂಪುಟದಲ್ಲಿ ಬಾಕಿ ಉಳಿದ ನಾಲ್ಕು ಸ್ಥಾನಗಳ ಭರ್ತಿ ವಿಚಾರ ಕುರಿತು ರಾಷ್ಟ್ರೀಯ ಅಧ್ಯಕ್ಷರ ಜತೆಗೆ ಸಾಂದರ್ಭಿಕವಾಗಿ ಚರ್ಚೆ ಮಾಡುತ್ತೇನೆ. ರಾಷ್ಟ್ರೀಯ ಅಧ್ಯಕ್ಷರ ಅಭಿಪ್ರಾಯ ಪಡೆದು ಸಂಪುಟ ವಿಸ್ತರಣೆ ವಿಷಯದಲ್ಲಿ ಮುಂದುವರೆಯುತ್ತೇನೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಕೋವಿಡ್ ಮೂರನೇ ಅಲೆ ಅಕ್ಟೋಬರ್ನಲ್ಲಿ ಬರುತ್ತದೆ ಅಂತ ತಜ್ಞರು ಹೇಳಿದ್ದಾರೆ. ಹಾಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಭೆ ನಡೆಸಲಿದ್ದೇವೆ. ಆಗಸ್ಟ್ 30 ರಂದು ಸಭೆ ನಡೆಸುತ್ತೇವೆ. ಈಗಾಗಲೇ ಇರುವ ಕೋವಿಡ್ ತಾಂತ್ರಿಕ ತಜ್ಞರ ಸಮಿತಿ ಮುಂದುವರೆಯಲಿದೆ. ಸಚಿವರ ಟಾಸ್ಕ್ ಫೋರ್ಸ್ ರಚನೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದರು.
ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಆದ ಅನ್ಯಾಯ ಖಂಡಿಸಿ ಜೆಡಿಎಸ್ ಪಾದಯಾತ್ರೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ನೆಲ ಜಲ ವಿಚಾರ ಬಂದಾಗ ರಾಜಕಾರಣ ಮಾಡಬಾರದು. ಹಿಂದೆ ನಾವೆಲ್ಲ ನೆಲ ಜಲ ವಿಚಾರದಲ್ಲಿ ಒಗ್ಗಟ್ಟಾಗಿ ಹೋರಾಡಿದ್ದೇವೆ. ಇದಕ್ಕೆ ಇತಿಹಾಸ ಸಾಕ್ಷಿ ಇದೆ. ಹಿಂದಿನ ಸಂದರ್ಭಗಳಲ್ಲಿ ಏನೇನಾಗಿದೆ ಅಂತ ತಿಳಿಯಲಿ. ಜೆಡಿಎಸ್ನವರಿಗೆ ಪಾದಯಾತ್ರೆ ಮಾಡಲು ಸ್ವಾತಂತ್ರ್ಯ ಇದೆ. ಆದರೆ ನೆಲ ಜಲ ವಿಚಾರದಲ್ಲಿ ನಾವು ನಮ್ಮ ಹಕ್ಕನ್ನು ಪಡೆದುಕೊಳ್ಳಲು ಎಲ್ಲ ಪ್ರಯತ್ನ ಮಾಡುತ್ತೇವೆ. ಇದರಲ್ಲಿ ಅನುಮಾನ ಇಲ್ಲವೆಂದು ಸ್ಪಷ್ಟಪಡಿಸಿದರು.