ಬೆಂಗಳೂರು : ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಕೋರಮಂಗಲದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಈ ಬಗ್ಗೆ ಭರವಸೆ ನೀಡಿದರು.
ಪ್ರಗತಿಪರ ಸಮಾಜ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಪೊಲೀಸರ ನಿಷ್ಠೆ, ದಕ್ಷತೆಯಿಂದ ಸಾಧ್ಯವಿದೆ. ಅಪರಾಧ, ಅಪರಾಧಿಗಳೊಂದಿಗೆ ರಾಜಿಯಿಲ್ಲದೆ ಕೆಲಸ ಮಾಡಿದರೆ ಅಪರಾಧ ತನ್ನಿಂದ ತಾನೇ ಕಡಿಮೆಯಾಗುತ್ತದೆ. ರಾಜ್ಯ ಸರ್ಕಾರಕ್ಕೆ ನಿಮ್ಮ ಸೇವೆಗಳ ಬಗ್ಗೆ ಹೆಮ್ಮೆ ಇದೆ, ದೇಶದಲ್ಲಿ ಕರ್ನಾಟಕ ಪೊಲೀಸ್ ನಂಬರ್-1 ಸ್ಥಾನಕ್ಕೆ ಏರಲಿ ಎಂದು ಹಾರೈಸಿದರು.
ಅಂತಃಕರಣ, ಮಾನವೀಯತೆ ಬಹಳ ಮುಖ್ಯ : ನಾಡಿನ, ಜನರ ರಕ್ಷಣೆ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವುದು ಇಲಾಖೆಯ ಪ್ರಮುಖ ಕರ್ತವ್ಯ. ಇಲಾಖೆಯಲ್ಲಿ ಶಿಸ್ತು, ದಕ್ಷತೆ, ನಿಷ್ಠೆ ಬಹಳ ಮುಖ್ಯ. ಚುನಾವಣೆ ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಪೊಲೀಸ್ ತುಕಡಿ ಕರೆಸುವಾಗ ಕರ್ನಾಟಕಕ್ಕೆ ಆದ್ಯತೆ ನೀಡುತ್ತಾರೆ.
ನಿಷ್ಪಕ್ಷಪಾತ, ಮಾನವೀಯತೆ, ಅಂತಃಕರಣ ಹಾಗೂ ನಿಸ್ಪೃಹ ಕರ್ತವ್ಯಕ್ಕೆ ನಮ್ಮ ಪೊಲೀಸ್ ಹೆಸರುವಾಸಿಯಾಗಿದೆ. ಬೆಂಗಳೂರಿನಲ್ಲಿ ನಾರ್ಕೋಟಿಕ್ಸ್, ಸೈಬರ್ ಹಾಗೂ ಫೋರೆನ್ಸಿಕ್ ಲ್ಯಾಬ್ವುಳ್ಳ ಠಾಣೆಗಳನ್ನು ತೆರೆಯಲಾಗಿದೆ. ಹುಬ್ಬಳ್ಳಿ, ಬಳ್ಳಾರಿಯಲ್ಲಿಯೂ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿವಮೊಗ್ಗ ಮುಂತಾದ ಕಡೆಗಳಲ್ಲಿಯೂ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು.
ಇಂಟೆಲಿಜೆನ್ಸ್ ಸಧೃಢತೆಗೆ ಕ್ರಮ : ಪೊಲೀಸರ ಬುದ್ಧಿವಂತಿಕೆಯೂ ಮುಖ್ಯ. ಹೊಸ ತರಬೇತಿ ವ್ಯವಸ್ಥೆ ಮತ್ತು ಸಿಬ್ಬಂದಿ ಹೆಚ್ಚಿಸುವ ಮೂಲಕ ಇಂಟೆಲಿಜೆನ್ಸ್ ಅನ್ನು ಇನ್ನಷ್ಟು ಸದೃಢಗೊಳಿಸಲು ಕ್ರಮವಹಿಸಲಾಗಿದೆ. ಪೊಲೀಸರ ಕಾರ್ಯದಲ್ಲಿ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದೆ. ಪೊಲೀಸ್ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಆರೋಗ್ಯ, ಸೇವೆ, ಬಂದೋಬಸ್ತಿಗೆ ಭತ್ಯೆ, ಬಡ್ತಿಗಳನ್ನು ನೀಡಲಾಗುತ್ತಿದೆ. ಪೊಲೀಸ್ ಗೃಹ ಯೋಜನೆಯಡಿ 10 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಅನುಮೋದನೆ ಹಾಗೂ ಅನುದಾನ ನೀಡಿದ್ದು, ಪೊಲೀಸರ ಆರೋಗ್ಯಕ್ಕಾಗಿ 100 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕೋವಿಡ್ ಸಂದರ್ಭದಲ್ಲಿ ಪೊಲೀಸರು ಮುಂಚೂಣಿಯಲ್ಲಿ ಕೆಲಸ ಮಾಡಿರುವುದು ಶ್ಲಾಘನೀಯ ಮತ್ತು ದಾಖಲಾರ್ಹ ಎಂದು ಸಿಎಂ ಬೊಮ್ಮಾಯಿ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ : ಎನ್ಐಎ ತಂಡ ಶಿವಮೊಗ್ಗಕ್ಕೆ ಭೇಟಿ, ತನಿಖೆ ಚುರುಕು