ಬೆಂಗಳೂರು: ಜನ್ಮದಿನಾಚರಣೆ ಆಚರಿಸಿಕೊಂಡ ನಂತರ ಎರಡು ದಿನಗಳ ಕಾಲ ತವರು ಜಿಲ್ಲಾ ಪ್ರವಾಸಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆರಳುತ್ತಿದ್ದಾರೆ. ತವರಿನ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುತ್ತಿರುವ ಬಿಎಸ್ವೈ, ಖುದ್ದು ಪರಿಶೀಲನೆ ನಡೆಸಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಇತ್ತೀಚೆಗೆ ತವರು ಜಿಲ್ಲೆಗೆ ಭೇಟಿ ನೀಡುವುದನ್ನು ಹೆಚ್ಚು ಮಾಡಿರುವ ಸಿಎಂ ಯಡಿಯೂರಪ್ಪ, ಫೆಬ್ರವರಿ 27ರಂದು 78 ವರ್ಷ ಮುಗಿಸಿ 79ನೇ ವಸಂತಕ್ಕೆ ಕಾಲಿಡಲಿದ್ದಾರೆ. ಫೆಬ್ರವರಿ 28ರಂದು ತವರು ಜಿಲ್ಲೆಗೆ ತೆರಳುತ್ತಿದ್ದಾರೆ. ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಸೊರಬ ತಾಲೂಕಿನ ಆನವಟ್ಟಿಗೆ ಆಗಮಿಸಲಿದ್ದು, ಆನವಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮೂಗುರು ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆ ಮತ್ತು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅಂದು ಮಧ್ಯಾಹ್ನ 1 ಗಂಟೆಗೆ ತವರು ಕ್ಷೇತ್ರ ಶಿಕಾರಿಪುರಕ್ಕೆ ಆಗಮಿಸಲಿರುವ ಸಿಎಂ ಅಂದು ಸಂಜೆ 4 ಗಂಟೆಗೆ ಟಿಎಪಿಸಿಎಂಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.50ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಮೆಡಿಕಲ್ ಕಾಲೇಜು ಅಸೋಸಿಯೇಷನ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ಸ್ಮಾರ್ಟ್ ಸಿಟಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂದು ರಾತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿಯೇ ವಾಸ್ತವ್ಯ ಹೂಡಲಿರುವ ಸಿಎಂ, ಮಾರ್ಚ್ 1ರಂದು ಬೆಳಗ್ಗೆ ಎನ್ಡಿವಿ ವಸತಿ ನಿಲಯ ಕಟ್ಟಡ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.