ಬೆಂಗಳೂರು: ಅನ್ಲಾಕ್ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಗಳತ್ತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗಮನಹರಿಸಿದ್ದು, ಇಂದು ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಅಧಿಕೃತ ನಿವಾಸ ಕಾವೇರಿಯಿಂದ ಮಹಾದೇವಪುರ ಕ್ಷೇತ್ರಕ್ಕೆ ತೆರಳಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನದವರೆಗೂ ಮಹಾದೇವಪುರದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೊದಲು ಬಿದರಳ್ಳಿ ಹೋಬಳಿಯ ಕಾಡುಗೋಡಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಬೆಂಗಳೂರು ನಗರ ವಿಭಾಗದಿಂದ ಆಯೋಜಿಸಿರುವ ಕಾಡುಗೋಡಿ 'ವೃಕೋದ್ಯಾನ' ಉದ್ಘಾಟಿಸಲಿರುವ ಸಿಎಂ, ನಂತರ ಕನ್ನಮಂಗಲದಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿರುವ ಕನ್ನಮಂಗಲ 'ಸಸ್ಯ ಶಾಸ್ತ್ರೀಯ ತೋಟ' ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಕನ್ನಮಂಗಲ ಕೆರೆ ಉದ್ಘಾಟನೆ ಮಾಡಲಿದ್ದಾರೆ.
ನಿಂಬೇಕಾಯಿಪುರದಲ್ಲಿ ಜನಪದರ ರಂಗ ಮಂದಿರ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿಎಂ ನಂತರ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಪರಿವೀಕ್ಷಣೆ ಮಾಡಲಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯದ ನಂತರ ವಾಪಸಾಗಲಿರುವ ಸಿಎಂ ಸಂಜೆ ಗೃಹ ಕಚೇರಿಯಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಾಂತ್ಯದ ಪದಾಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ನಂತರ ಆರ್ಥಿಕ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಇದನ್ನೂ ಓದಿ: ಸರ್ಕಾರ ಅಸ್ಥಿರಗೊಳ್ಳುವ ಪ್ರಶ್ನೆ ಇಲ್ಲ, ರಮೇಶ ಜಾರಕಿಹೊಳಿ ಜೊತೆ ನಾವಿದ್ದೇವೆ: ಸಚಿವ ಭೈರತಿ