ಬೆಂಗಳೂರು: ಸಂದರ್ಭ ಬಂದಾಗ ಉಚಿತ ಲಸಿಕೆ ಕೊಡುವ ಬಗ್ಗೆ ಸಿಎಂ ಯಡಿಯೂರಪ್ಪ ಘೋಷಣೆ ಮಾಡ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಆರ್.ಆರ್.ನಗರದಲ್ಲಿ ಪ್ರಚಾರ ನಡೆಸಿದ ನಂತರ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲೂ ಉಚಿತ ಕೊರೊನಾ ವ್ಯಾಕ್ಸಿನ್ ಕೊಡ್ತೀವಿ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ನಾನು ಒತ್ತಾಯ ಮಾಡ್ತೀನಿ. ಜನರ ಜೀವದ ಪ್ರಶ್ನೆಯಾಗಿರೋದ್ರಿಂದ ಉಚಿತ ವ್ಯಾಕ್ಸಿನ್ ಸಿಗುತ್ತೆ. ನಮ್ಮ ಸರ್ಕಾರಕ್ಕೆ ಜನರಿಗಿಂತ ದೊಡ್ಡದು ಯಾವುದೂ ಇಲ್ಲ. ಸಂದರ್ಭ ಬಂದರೆ ನಮ್ಮ ರಾಜ್ಯದಲ್ಲೂ ಉಚಿತ ವ್ಯಾಕ್ಸಿನ್ ಸಿಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬಿಹಾರ ಬಿಜೆಪಿ ಪ್ರಣಾಳಿಕೆಯಲ್ಲಿ ಉಚಿತ ಕೊರೊನಾ ಲಸಿಕೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಹಾರ ಪ್ರಣಾಳಿಕೆ ಬಗ್ಗೆ ನಾನು ಚರ್ಚೆ ಮಾಡಲು ಇಷ್ಟಪಡಲ್ಲ. ಲಸಿಕೆ ಬಗ್ಗೆ ಯಾರೂ ರಾಜಕಾರಣ ಮಾಡೋದು ಸರಿಯಲ್ಲ. ಸಿದ್ದರಾಮಯ್ಯನವರು ತಾಕತ್ ಇದ್ರೆ ರಾಜ್ಯದಲ್ಲಿ ಉಚಿತ ವ್ಯಾಕ್ಸಿನ್ ಕೊಡಿ ಅಂತ ಸವಾಲು ಹಾಕಿದ್ದಾರೆ. ವ್ಯಾಕ್ಸಿನ್ ವಿಚಾರ ತಾಕತ್ತಿನ ವಿಷಯ ಅಲ್ಲ. ಜನರ ಉಳಿವು ಅಳಿವಿನ ವಿಷಯ. ಕೊರೊನಾ ಪರಿಸ್ಥಿತಿಯನ್ನು ನಮ್ಮ ಸರ್ಕಾರ ಉತ್ತಮವಾಗಿ ನಿರ್ವಹಿಸಿದೆ ಎಂದರು.
ಸಮುದಾಯ ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಆರ್ ಆರ್ ನಗರದಲ್ಲಿ ಕಾಂಗ್ರೆಸ್ ನಿಂದ ಒಕ್ಕಲಿಗ ಕಾರ್ಡ್ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲೂ ಒಕ್ಕಲಿಗ ಸಮುದಾಯದ ಹಿರಿಯ ನಾಯಕರಿದ್ದಾರೆ. ಆರ್.ಅಶೋಕ್, ಅಶ್ವತ್ಥ್ ನಾರಾಯಣ ಇಬ್ಬರೂ ಒಕ್ಕಲಿಗ ಸಮುದಾಯದ ನಾಯಕರು. ಸಮುದಾಯವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡ್ತಿದೆ ಎಂದು ಆರೋಪಿಸಿದರು.
ಡಿಕೆಶಿ ಅವರು ಲೋಕಸಭೆ ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಕಸರತ್ತು ಮಾಡ್ತಿದ್ದಾರೆ. ಕಾಂಗ್ರೆಸ್ ನಲ್ಲಿಯೇ ಸಿಎಂಗಾಗಿ ಒಳ ಜಗಳ ಶುರುವಾಗಿದೆ. ಡಿಕೆಶಿ ಸಿಎಂ ಆಗುವ ಕನಸು ಕಾಣ್ತಿದ್ದಾರೆ. ಇಲ್ಲಿ ಸೋತ್ರೆ ಅವರು ಇಡೀ ರಾಜ್ಯದಲ್ಲಿ ಪಕ್ಷವನ್ನು ಹೇಗೆ ಅಧಿಕಾರಕ್ಕೆ ತರ್ತಾರೆ?.ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಸೋಲಬೇಕು ಅನ್ನೋದು ಅವರ ಪಕ್ಷದವರ ಮನಸಲ್ಲೇ ಇದೆ. ಆರ್.ಆರ್. ನಗರದಲ್ಲಿ ಮುನಿರತ್ನ, ಶಿರಾದಲ್ಲಿ ರಾಜೇಶ್ ಗೌಡ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.