ಬೆಂಗಳೂರು: ಸಂವಿಧಾನ ದಿನ ಆಚರಣೆ ಹಿನ್ನೆಲೆ, ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಭಾಶಯಗಳನ್ನು ಕೋರಿದ್ದಾರೆ.
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದ ಸುಭದ್ರ ಅಡಿಪಾಯ ನಮ್ಮ ಸಂವಿಧಾನ. 1949ರ ನವೆಂಬರ್ 26ರಂದು ನಮ್ಮ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾದ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನೆಗೆ ಕೊಡುಗೆ ನೀಡಿದ ಎಲ್ಲ ಮಹನೀಯರಿಗೆ ವಂದಿಸುತ್ತಾ, ನಾಡಿನ ಸಮಸ್ತ ಜನತೆಗೆ ಸಂವಿಧಾನ ದಿವಸದ ಶುಭಾಶಯಗಳು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಇನ್ನೂ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣರವರು ಜಿಟಿ - ಜಿಟಿ ಮಳೆಯ ನಡುವೆ ಬೆಳಗ್ಗೆ ನಗರದ ಯಶವಂತಪುರ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. "ಅಂಬೇಡ್ಕರ್ ಅವರು ಮಹಾಜ್ಞಾನಿಯಾಗಿದ್ದು, ಅವರ ದೂರದೃಷ್ಟಿಯ ಫಲವಾಗಿ ಜಗತ್ತಿನ ಸರ್ವಶ್ರೇಷ್ಠ ಸಂವಿಧಾನ ನಮ್ಮ ಮುಂದಿದೆ. ಇಂತಹ ಸಂವಿಧಾನ ರಚನೆಯು ಬಾಬಾ ಸಾಹೇಬರ ನೇತೃತ್ವದಲ್ಲಿ ನಡೆದಿದೆ. ಈ ಕಾರಣಕ್ಕಾಗಿ ಇಡೀ ಭಾರತ ಅವರನ್ನು ಇಂದು ಸ್ಮರಿಸುತ್ತಿದೆ" ಎಂದರು.
ಇದನ್ನು ಓದಿ: ಸಂವಿಧಾನದ ಆಶಯಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಸಿಎಂ
ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸುರೇಶ್ ಕುಮಾರ್ ಸೇರಿದಂತೆ ಸಿಎಂ ಸಂಪುಟ ಸಹೋದ್ಯೋಗಿಗಳು, ರಾಜ್ಯ ಬಿಜೆಪಿ ನಾಯಕರು ನಾಡಿನ ಜನತೆಗೆ ಸಂವಿಧಾನ ದಿನದ ಶುಭ ಕೋರಿದ್ದಾರೆ.