ಬೆಂಗಳೂರು: ನೆರೆ ಪೀಡಿತ ಜಿಲ್ಲೆಗಳಿಗೆ ಹೋಗಬೇಕೆಂದು ಅಧಿವೇಶನ ಮೊಟಕುಗೊಳಿಸಿ ಸಿಎಂ ಯಡಿಯೂರಪ್ಪ ಮತ್ತು ಡಿಸಿಎಂಗಳಿಬ್ಬರು ಇದೀಗ ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿ ಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಈಶ್ವರ್ ಖಂಡ್ರೆ, ಮಹಾರಾಷ್ಟ್ರದಲ್ಲಿ ಪ್ರಚಾರ ಮಾಡೋದು ಇವರಿಗೆ ಮುಖ್ಯ. ಇಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯ ಮಾಡೋದು ಬಿಟ್ಟು ಮಹಾರಾಷ್ಟ್ರಕ್ಕೆ ಹೋಗಿರೋದು ಸರಿಯಲ್ಲ. ಮಹಾರಾಷ್ಟ್ರಕ್ಕೆ ತೆರೆಳಲೆಂದೇ ಅಧಿವೇಶನವನ್ನು ಮೂರು ದಿನ ಮಾತ್ರ ನಡೆಸಿದರೆಂದು ಆರೋಪಿಸಿದರು.
ಅಷ್ಟೇ ಅಲ್ಲ, ಕರ್ನಾಟಕದ ಜನರನ್ನು 2ನೇ ದರ್ಜೆಯ ಪ್ರಜೆಗಳು ಎಂದುಕೊಂಡಿದ್ದಾರಾ ಎಂದು ಪ್ರಶ್ನಿಸಿ ಇದಕ್ಕೆ ಪ್ರಧಾನಿ, ಸಿಎಂ ಉತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿಕೆ ನಾಚಿಗೆಕೇಡಿನ ಸಂಗತಿ. ಅದನ್ನು ನಾವು ಖಂಡಿಸುತ್ತೇವೆಂದು ಕಿಡಿ ಕಾರಿದರು.
ಇನ್ನು, ನೆರೆ ಪೀಡಿತರಿಗೆ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ಧಮ್ ಇದ್ದರೆ ಸರ್ಕಾರ ಜಂಟಿ ಸದನ ಸಮಿತಿ ರಚಿಸಲಿ ಎಂದು ಯಡಿಯೂರಪ್ಪಗೆ ಸಂಸದ ವಿ ಎಸ್ ಉಗ್ರಪ್ಪ ಸವಾಲು ಹಾಕಿದರು. ನೆರೆ ಪೀಡಿತರಿಗೆ ಎಷ್ಟು ಪರಿಹಾರ ಕೊಟ್ಟಿದ್ದಾರೆಂದು ಜಂಟಿ ಸದನ ಸಮಿತಿಯೇ ಪತ್ತೆ ಹಚ್ಚಲಿ. ಈ ಸಮಿತಿಯಲ್ಲಿ ಎಲ್ಲ ಪಕ್ಷಗಳ ಶಾಸಕರೂ ಇರಲಿ, 24 ತಾಸುಗಳಲ್ಲಿ ಜಂಟಿ ಸದನ ಸಮಿತಿ ರಚಿಸಲಿ ಎಂದು ಸವಾಲು ಹಾಕಿದರು.