ಬೆಂಗಳೂರು : ಬಹುದಿನಗಳ ಬೇಡಿಕೆಯಾಗಿರುವ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಕಾಡುಗೊಲ್ಲ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು.
ನಿಗಮ-ಮಂಡಳಿ ಹಾಗೂ ವಿವಿಗಳಲ್ಲಿ ಕಾಡುಗೊಲ್ಲರಿಗೆ ಪ್ರಾತಿನಿಧ್ಯ ನೀಡಿ ನಾಮನಿರ್ದೇಶನ ಮಾಡುವುದು, ಶ್ರೀಘ್ರ ಕಾಡುಗೊಲ್ಲ ಅಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಬೇಕು, ಅಲೆಮಾರಿ, ಅರೆ ಅಲೆಮಾರಿ ಮತ್ತು ಓಬಿಸಿ ಪಟ್ಟಿಗೆ ಕಾಡುಗೊಲ್ಲ ಜಾತಿ ಸೇರಿಸಬೇಕು ಎನ್ನುವ ಬೇಡಿಕೆ ಬಹುದಿನಗಳಿಂದ ಕೇಳಿಬರುತ್ತಿದೆ. ಈ ಕೂಗಿಗೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ರೈತರಿಗೆ ಸ್ವಾತಂತ್ರ ನೀಡುವುದಕ್ಕಾಗಿ ಅವರು ಬೆಳೆದ ಬೆಳೆಯನ್ನು ಅವರು ಎಪಿಎಂಸಿಯಲ್ಲಾದ್ರೂ ಅಥವಾ ಎಲ್ಲಿ ಬೇಕಾದ್ರೂ ಮಾರಾಟ ಮಾಡುವ ಅವಕಾಶ ಅವರಿಗೆ ನೀಡಲಾಗುತ್ತಿದೆ. ಬಹುತೇಕ ರೈತರು ಇದನ್ನು ಸ್ವಾಗತ ಮಾಡುತ್ತಿದ್ದಾರೆ. ಹಾಗೆಯೇ ಬಹುದಿನಗಳ ಬೇಡಿಕೆಯಂತೆ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ನಿಗಮದ ಹಿಂದೆ ಶಿರಾ ಉಪಚುನಾವಣೆ?: ಶಾಸಕ ಸತ್ಯನಾರಾಯಣ ಅವರ ನಿಧನದಿಂದಾಗಿ ಶಿರಾ ವಿಧಾನಸಭಾ ಕ್ಷೇತ್ರ ತೆರವಾಗಿದೆ. ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ಯಾವಾಗ ಬೇಕಾದ್ರೂ ಉಪ ಚುನಾವಣೆ ಘೋಷಣೆಯಾಗಬಹುದು. ಈ ಕ್ಷೇತ್ರದಲ್ಲಿ 154 ಗೊಲ್ಲರ ಹಟ್ಟಿಗಳಿವೆ. 40 ಸಾವಿರಕ್ಕೂ ಹೆಚ್ಚಿನ ಕಾಡುಗೊಲ್ಲರ ಮತಗಳಿವೆ. ಹಾಗಾಗಿ, ಕಾಡುಗೊಲ್ಲರ ಮತಗಳ ಮೇಲೆ ಕಣ್ಣಿಟ್ಟು ಕಾಡುಗೊಲ್ಲ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ನಿರ್ಧಾರ ಪ್ರಕಟಿಸಲಾಗಿದೆಯಾ ಎನ್ನುವ ಪ್ರಶ್ನೆ ಎದ್ದಿದೆ.
ಸದನದಲ್ಲಿ ಅವಿಶ್ವಾಸ ನಿರ್ಣಯ ಚರ್ಚೆಗೆ ಉತ್ತರ ನೀಡುವ ವೇಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಶಿರಾ ಕ್ಷೇತ್ರದಲ್ಲಿ ನಮ್ಮ ಸರ್ಕಾರ ಗೆದ್ದು ನಮಗೆ ಅಲ್ಲಿನ ಜನರ ಆಶೀರ್ವಾದ ಇದೆ ಎಂದು ತೋರಿಸುತ್ತೇವೆ ಎಂಬ ಸವಾಲನ್ನು ಎಸೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.