ಬೆಂಗಳೂರು: ರಾಜ್ಯದ ನೆರೆ ಪೀಡಿತ ಪ್ರದೇಶಗಳಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಮತ್ತೊಮ್ಮೆ ಪ್ರವಾಸ ಮಾಡಲಿದ್ದು, ಅಕ್ಟೋಬರ್ 3ರಿಂದ 5ರವರೆಗೆ ಬೆಳಗಾವಿ, ಬಾಗಲಕೋಟೆ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಗೆ ಭೇಟಿ ನೀಡಲಿದ್ದಾರೆ.
ಅ.3ರಂದು ಸಿಎಂ, ಬೆಂಗಳೂರಿನಿಂದ ವಿಮಾನದ ಮೂಲಕ ಬೆಳಗಾವಿಗೆ ಪ್ರಯಾಣ ಬೆಳಸಲಿದ್ದು, ನಂತರ ಪ್ರವಾಹ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಅಂದು ರಾತ್ರಿ ಬೆಳಗಾವಿಯ ಸರ್ಕಿಟ್ ಹೌಸ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅ.4ರಂದು ಬೆಳಗಾವಿಯಲ್ಲಿ ಸಾರ್ವಜನಿಕರಿಂದ ಕುಂದು-ಕೊರತೆಗಳನ್ನು ಆಲಿಸಿ, ನಂತರ ಅಥಣಿಯ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿ ಪರಿಹಾರ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ.
ಬಳಿಕ ಬಾಗಲಕೋಟೆಯಲ್ಲಿ ನೆರೆ ಪರಿಹಾರ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿ ಅಲ್ಲಿಂದ ವಿಜಯಪುರಕ್ಕೆ ತೆರಳಿ ಅಲ್ಲಿನ ಆಲಮಟ್ಟಿ ಅತಿಥಿ ಗೃಹದಲ್ಲಿ ಉಳಿದುಕೊಳ್ಳಲಿದ್ದಾರೆ.
ಅ.5ರಂದು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿರುವ ಸಿಎಂ, ಅಲ್ಲಿಂದ ನೇರವಾಗಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮತ್ತು ಪ್ರಗತಿ ಪರಿಶೀಲನೆ ಕಾರ್ಯ ನಡೆಸಲಿದ್ದಾರೆ. ಬಳಿಕ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ತೆರಳಿ ಜಿಲ್ಲೆಯ ಪ್ರವಾಹ ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಈ ಬಳಿಕ ಸಾರ್ವಜನಿಕರ ಕುಂದು- ಕೊರತೆಗಳನ್ನು ಆಲಿಸಿ ಶನಿವಾರ ರಾತ್ರಿ ಯಾದಗಿಯಿಂದ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.