ಬೆಂಗಳೂರು : ಪರಿಸರ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದ ಆವರಣದಲ್ಲಿ ಇಂದು ಕ್ಯಾನ್ಸರ್ ನಿರೋಧಕ ಅಂಶವುಳ್ಳ ಸಸಿ ನೆಟ್ಟು, ರೈತರು ಈ ಗಿಡವನ್ನು ಹೆಚ್ಚಾಗಿ ಬೆಳೆಯುವಂತೆ ಮನವಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಪರಿಸರ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ನಿರೋಧಕ ಗಿಡ ನೆಟ್ಟು ಮಾತನಾಡಿದ ಸಿಎಂ, ಈ ಗಿಡ ಕ್ಯಾನ್ಸರ್ ನಿರೋಧಕ ಶಕ್ತಿ ಹೊಂದಿದೆ. ಇದರ ತೊಗಟೆ ಮತ್ತು ಬೀಜದಲ್ಲಿ ಔಷಧೀಯ ಗುಣಗಳಿವೆ ಎಂದರು.
ಈ ಗಿಡ ಕೈಗಾರಿಕಾ ಉತ್ಪನ್ನಗಳಿಗೂ ಹೆಚ್ಚು ಬಳಕೆಯಾಗುತ್ತದೆ. ನಾಡಿನ ರೈತರು ಈ ಗಿಡವನ್ನು ನೆಡುವ ಮೂಲಕ ತಮ್ಮ ವಾಣಿಜ್ಯ ಬೆಳೆಗಳಂತೆ ಇದನ್ನು ಬಳಸಿಕೊಳ್ಳಬಹುದು. ಇಂತಹ ಹೊಸ ಕೃಷಿ ವಿಧಾನಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ರೈತರಿಗೆ ಸಲಹೆ ಮಾಡಿದರು.