ಬೆಂಗಳೂರು: ಬಿ ಎಸ್ ಯಡಿಯೂರಪ್ಪ ಒಬ್ಬ ಡೋಂಗಿ ರೈತರ ನಾಯಕ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1974 ಮಾರ್ಚ್ 1ರಂದು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ಬಂತು. ಅಲ್ಲಿಂದ 46 ವರ್ಷ ರೈತರು ಭೂ ಮಾಲೀಕರಾಗಿ ಬದುಕುತ್ತಿದ್ದಾರೆ. ಆದರೆ ಇದೀಗ ಇದಕ್ಕೆ ತಿದ್ದುಪಡಿ ತರಲಾಗಿದೆ. ಈಗ ತಂದಿರುವ ತಿದ್ದುಪಡಿ ಕಾನೂನು ರೈತರ ಆಶಯಕ್ಕೆ ಮಾರಕವಾಗಲಿದೆ ಎಂದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈಗ ಮಾಧ್ಯಮಗಳ ಮುಂದೆ ಇದು ರೈತಸ್ನೇಹಿ ತಿದ್ದುಪಡಿ ಎಂದು ಹೇಳುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಸಣ್ಣ ರೈತರು ಈ ಮಾರಕ ಕಾನೂನು ತಿದ್ದುಪಡಿಯಿಂದಾಗಿ ತಮ್ಮ ಭೂಮಿಯನ್ನು ಮಾರಿಕೊಳ್ಳಬೇಕಾದ ಪರಿಸ್ಥಿತಿ ಎದುರಿಸಲಿದ್ದಾರೆ. ಆರಂಭದಲ್ಲಿ ಒಂದಿಷ್ಟು ದಿನ ನೆಮ್ಮದಿಯಾಗಿ ಇದ್ದಂತೆ ಕಂಡರೂ ಕೊನೆಗೆ ಅದೇ ಜಮೀನಿನಲ್ಲಿ ಕೂಲಿ ಕಾರ್ಮಿಕರಾಗಿ ಬದುಕುವ ಸ್ಥಿತಿ ಎದುರಾಗಲಿದೆ. ತರಾತುರಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಕಾನೂನು ತಿದ್ದುಪಡಿಯನ್ನು ತಂದಿವೆ. ಕೇವಲ ದುಡ್ಡಿಗೋಸ್ಕರ ಈ ಕಾನೂನಿಗೆ ತಿದ್ದುಪಡಿ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಇಂಥದ್ದೊಂದು ಮಾರಕ ಕಾನೂನು ಜಾರಿಗೆ ತಂದು ಜನರ ಪ್ರತಿಭಟನೆಯನ್ನು ಕೂಡ ಹತ್ತಿಕ್ಕಲಾಗಿದೆ. ಎಷ್ಟು ಹಣ ಮಾಡಿಕೊಂಡಿದ್ದೀರಿ ಸಿಎಂಗೆ ಸಿದ್ದರಾಮಯ್ಯ ಪ್ರಶ್ನಿಸಿದರು.
ಕೋವಿಡ್ ಹೆಸರಿನಲ್ಲಿ ಹೆಣಗಳ ಮೇಲೆ ಹಣ ಮಾಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಕೋವಿಡ್ ಸಲಕರಣೆಗಳು ಖರೀದಿಯಲ್ಲಿ ಭಾರಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಯಡಿಯೂರಪ್ಪ ಹಾಗೂ ಯಡಿಯೂರಪ್ಪನ ಮಕ್ಕಳು ಎಲ್ಲಾ ಕೆಲಸದಲ್ಲಿಯೂ ಹಣ ಹೊಡೆದಿದ್ದಾರೆ. ಹಿಂದೆ ಯಡಿಯೂರಪ್ಪ ಚೆಕ್ ಮೂಲಕ ಲಂಚ ಸ್ವೀಕರಿಸಿದ್ದರು. ಇಂದು ಅವರ ಮಗ ಮೊಮ್ಮಗ ಅಳಿಯ ಆರ್ಟಿಜಿಎಸ್ ಮೂಲಕ ಹಣ ಪಡೆದಿದ್ದಾರೆ. ನನ್ನ 40 ವರ್ಷಗಳ ರಾಜಕೀಯ ಬದುಕಿನಲ್ಲಿ ಇಂಥದೊಂದು ಭ್ರಷ್ಟ ಸರ್ಕಾರವನ್ನು ನೋಡಲಿಲ್ಲ. ಕರ್ನಾಟಕ ರಾಜ್ಯವನ್ನು ಗುಲಾಮ ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ. ರೈತರು ಹಾಗೂ ಜನರು ಈ ವಿಚಾರದಲ್ಲಿ ಜಾಗೃತರಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಕಾಂಗ್ರೆಸ್ ಪಕ್ಷ ಕೇವಲ ಅಧಿಕಾರಕ್ಕೆ ಇರುವ ಪಕ್ಷವಲ್ಲ. ಸಾಮಾಜಿಕ ಜನಪರವಾದ ಪಕ್ಷ. ಅಶಕ್ತರು ಹಾಗೂ ದುರ್ಬಲರಿಗೆ ಶಕ್ತಿ ತುಂಬಲು ಇರುವ ಪಕ್ಷ ಕಾಂಗ್ರೆಸ್. ಈ ನಿಟ್ಟಿನಲ್ಲಿ ನಾವೆಲ್ಲ ರೈತರಿಗೆ ಈ ಕಾನೂನಿನ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.