ಬೆಂಗಳೂರು: ನಗರದ ಯಲಹಂಕ ತಹಶೀಲ್ದಾರ್ ಎನ್. ರಘುಮೂರ್ತಿ ನೇತೃತ್ವದ ತಂಡ, ಕಳೆದ ಸಾಲಿನ ಸೆಪ್ಟಂಬರ್ನಿಂದ ಇಲ್ಲಿಯವರೆಗೆ ಸುಮಾರು 1600 ಕೋಟಿ ರೂ. ಮೌಲ್ಯದ 192 ಎಕರೆ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ.
ಯಲಹಂಕ ತಾಲೂಕು ಚಿಕ್ಕಜಾಲಾ ಹೋಬಳಿಯ ಹೊಸಹಳ್ಳಿಯ ರಾಜಕಾಲುವೆ ಮೇಲೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ 8 ಮನೆಗಳನ್ನು ತಹಶೀಲ್ದಾರ್ ಎನ್. ರಘುಮೂರ್ತಿ ನೇತೃತ್ವದ ತಂಡ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಯಲಹಂಕ ತಾಲೂಕಿನಾದ್ಯಂತ ರಾಜ ಕಾಲುವೆ ಮೇಲೆ ಮನೆ ನಿರ್ಮಿಸಿಕೊಂಡಿರುವವರಿಗೆ ಬಿಗ್ ಶಾಕ್ ನೀಡಿದ್ದಾರೆ.
ತಹಶೀಲ್ದಾರ್ ಮತ್ತವರ ತಂಡ ಕಾರ್ಯಾಚರಣೆಗಿಳಿದ ಸಂದರ್ಭದಲ್ಲಿ ಮನೆಗಳ ಮಾಲೀಕರು ಹಾಗೂ ಸ್ಥಳೀಯರು ಯಾವುದೇ ಕಾರಣಕ್ಕೂ ಮನೆಗಳನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಆದರೆ, ಉಚ್ಚನ್ಯಾಯಾಲಯದ ಆದೇಶದಂತೆ ರಾಜಕಾಲುವೆ ಒತ್ತುವರಿ ತೆರವುಗೊಳಿಸುತ್ತಿದ್ದೇವೆ. ಯಾರು ಅಡ್ಡಪಡಿಸಬಾರದು ಎಂದು ಮನವೊಲಿಸಿ ತೆರವು ಕಾರ್ಯಾಚರಣೆ ಮುಂದುವರೆಸಿದರು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ, ಉಚ್ಛನ್ಯಾಯಾಲಯದ ಆದೇಶದಂತೆ ಸರ್ವೆ ನಂ.1,2 ಮತ್ತು 81,82 ಮಧ್ಯಭಾಗದಲ್ಲಿರುವ ರಾಜಕಾಲುವೆ ಓಣಿ ವಿವಾದ 2011ರಿಂದಲೂ ನ್ಯಾಯಾಲಯದಲ್ಲಿತ್ತು. ಕಳೆದ ತಿಂಗಳು ತೆರವುಗೊಳಿಸುವಂತೆ ಆದೇಶವಿತ್ತು. ಆದರೆ, ಮನೆ ನಿರ್ಮಿಸಿಕೊಂಡಿರುವವರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ನ್ಯಾಯಾಲಯದಿಂದ ಒಂದು ತಿಂಗಳವರೆಗೆ ಕಾಲಾವಕಾಶ ಪಡೆದು ಒಂದು ತಿಂಗಳೊಳಗಾಗಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿಕೊಳ್ಳಲು ಕಾಲಾವಾಕಾಶ ನೀಡಲಾಗಿತ್ತು. ಆದರೆ ಯಾರು ತೆರವುಗೊಳಿಸಲು ಮುಂದಾಗಿಲ್ಲ. ಹೀಗಾಗಿ, ತಾಲೂಕು ಆಡಳಿತದಿಂದಲೇ ತೆರವುಗೊಳಿಸಲಾಗುತ್ತಿದೆ ಎಂದರು.
ಸಂತ್ರಸ್ತರಿಗೆ 5 ಎಕರೆ ಭೂಮಿ?:
ರಾಜಕಾಲುವೆ ಮೇಲೆ ಮನೆ ನಿರ್ಮಾಣ ಮಾಡಿಕೊಂಡಿದ್ದ ಸಂತ್ರಸ್ತರಿಗೆ ಮಾನವೀಯತೆ ಹಿನ್ನೆಲೆಯಲ್ಲಿ ನಿವೇಶನ ನೀಡಲು 5 ಎಕರೆ ಸರ್ಕಾರಿ ಜಾಗ ಮೀಸಲಿಡಲು ಯೋಜನೆ ರೂಪಿಸಲಾಗಿದೆ. ಮನೆ ಇಲ್ಲದ ಸಂತ್ರಸ್ತರು ಆತಂಕಪಡಬೇಕಿಲ್ಲ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಳ್ಳಲು ಪರ್ಯಾಯವಾಗಿ ಸರ್ಕಾರದವತಿಯಿಂದ ಜಾಗ ನೀಡಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದರು.