ಬೆಂಗಳೂರು: ಖಾಸಗಿ ಅಪಾರ್ಟ್‌ಮೆಂಟ್‌ನವರು ಬಿಡಿಎ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಉದ್ಯಾನವನ್ನು ತೆರವುಗೊಳಿಸಿರುವ ಬಿಡಿಎ ಅಧಿಕಾರಿಗಳು ಜಾಗವನ್ನು ಮರುವಶಕ್ಕೆ ತೆಗೆದುಕೊಂಡಿದ್ದಾರೆ. ದೇವರಚಿಕ್ಕನಹಳ್ಳಿಯ ಬಿಟಿಎಂ ಲೇಔಟ್ನ 4ನೇ ಹಂತದ 2ನೇ ಬ್ಲಾಕ್ನ ಸರ್ವೇ ನಂಬರ್ 24/5 ರಲ್ಲಿ ಎಂಟೂವರೆ ಗುಂಟೆ ಜಾಗ ಬಿಡಿಎಗೆ ಸೇರಿತ್ತು. ಅದರ ಪಕ್ಕದಲ್ಲೇ ಗ್ರೀನ್ ಆರ್ಕಿಡ್ ಎಂಬ ಖಾಸಗಿ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಲಾಗಿದೆ.
ಬಿಡಿಎಗೆ ಸೇರಿದ ಸ್ಥಳ ಅತಿಕ್ರಮಣ ಮಾಡಿಕೊಂಡ ಅಪಾರ್ಟ್‌ಮೆಂಟ್‌ನವರು ಪಾರ್ಕ್ ನಿರ್ಮಾಣ ಮಾಡಿಕೊಂಡಿದ್ದರು. ಕಳೆದ 15 ವರ್ಷಗಳಿಂದ ಹಲವು ಬಾರಿ ಜಾಗವನ್ನು ಬಿಡುವಂತೆ ಬಿಡಿಎ ಎಚ್ಚರಿಕೆ ನೀಡಿದ್ದರೂ ಜಾಗ ತೆರವುಗೊಳಿಸಿರಲಿಲ್ಲ.
ಸ್ಥಳ ಪರಿಶೀಲನೆ ನಡೆಸಿದ್ದ ಬಿಡಿಎ ಅಧ್ಯಕ್ಷ: ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ್ದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಕೂಡಲೇ ಜಾಗವನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಧ್ಯಕ್ಷರ ಸೂಚನೆ ಮತ್ತು ಆಯುಕ್ತ ಕುಮಾರ್ ನಾಯಕ್ ಅವರ ಆದೇಶದ ಮೇರೆಗೆ ಗುರುವಾರ ಬೆಳಗ್ಗೆ ಬಿಡಿಎ ಎಸ್ಟಿಎಫ್ ಮುಖ್ಯಸ್ಥ ನಂಜುಂಡೇಗೌಡ, ಡಿವೈಎಸ್ಪಿ ರವಿಕುಮಾರ್, ಇನ್ ಸ್ಪೆಕ್ಟರ್ ಲಕ್ಷ್ಮಯ್ಯ, ಎಂಜಿನಿಯರ್ಗಳಾದ ಅಶೋಕ್ ಮತ್ತು ಪರುಶರಾಮ್ ಅವರು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಉದ್ಯಾನವನ್ನು ತೆರವುಗೊಳಿಸಿದ್ದಾರೆ ಎಂದು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಹರಾಜಿನ ಮೂಲಕ ಹಂಚಿಕೆ: ಈ ಜಾಗದ ಬೆಲೆ 12 ಕೋಟಿ ರೂಪಾಯಿ ಆಗಿದ್ದು, ಜಾಗವನ್ನು ಮರುವಶಪಡಿಸಿಕೊಂಡಿರುವುದಕ್ಕೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಜಾಗವನ್ನು ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಹರಾಜಿನ ಮೂಲಕ ಹಂಚಿಕೆ ಮಾಡಲಾಗುವುದು ಎಂದಿದ್ದಾರೆ.
ಅತಿಕ್ರಮಣ ಹಂತ ಹಂತವಾಗಿ ತೆರವು: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ನಗರದಲ್ಲಿನ ಪ್ರಮುಖ ಬಡಾವಣೆಗಳಲ್ಲಿ ಬಿಡಿಎ ಜಾಗವನ್ನು ಅನೇಕ ಜನರು ಅತಿಕ್ರಮಣ ಮಾಡಿರುವುದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಇಂತಹ ಜಾಗಗಳನ್ನು ಹಂತಹಂತವಾಗಿ ತೆರವುಗೊಳಿಸಿ ಮರುವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅತಿಕ್ರಮಣ ಗಮನಕ್ಕೆ ತನ್ನಿ: ಭೂಕಬಳಿಕೆದಾರರು ಬಿಡಿಎ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದ್ದರೆ ಬಿಡಿಎ ಗಮನಕ್ಕೆ ತರುವಂತೆ ಸಾರ್ವಜನಿಕರಲ್ಲಿ ಈ ಹಿಂದೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಮನವಿಗೆ ಓಗೊಟ್ಟ ಕೆಲವು ಸಾರ್ವಜನಿಕರು ಒತ್ತುವರಿಯಾಗಿರುವ ಬಿಡಿಎ ಜಾಗಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದ್ದು, ಸದ್ಯದಲ್ಲೇ ಅಂತಹ ಜಾಗಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ವಿಶ್ವನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿತಾ ಬಿಬಿಎಂಪಿ?