ಬೆಂಗಳೂರು: 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಶೆಟ್ಟಿಹಳ್ಳಿ ಸಮೀಪ ನಡೆದಿದೆ. ರೈಲ್ವೆ ಹಳಿ ಮೇಲೆ ಬಾಲಕಿಯ ಶವ ಪತ್ತೆಯಾಗಿದ್ದು, ಶಾಲೆಯ ಪ್ರಾಂಶುಪಾಲರ ಮಾನಸಿಕ ಒತ್ತಡವೇ ಮಗಳ ಆತ್ಮಹತ್ಯೆಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಶಿವಕುಮಾರ್ ಮತ್ತು ಕವಿತಾ ದಂಪತಿ ಪುತ್ರಿಯು ಹೆಸರಘಟ್ಟ ರಸ್ತೆಯಲ್ಲಿನ ನಾಗಸಂದ್ರ ಪೋಸ್ಟ್ ಬಳಿ ಇರುವ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. ಆದರೆ, ಎಂದಿನಂತೆ ನಿನ್ನೆ ಬೆಳಗ್ಗೆ ಐದು ಗಂಟೆಗೆ ಎದ್ದು ವಾಕಿಂಗ್ಗೆ ಹೋದವಳು ವಾಪಸ್ ಬರಲೇ ಇಲ್ಲ. ಬಳಿಕ ಬಾಲಕಿ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾಳೆ.
ಬಾಲಕಿಯು ಕಳೆದ ಆಗಸ್ಟ್ ತಿಂಗಳಿನಲ್ಲಿ ಒಂದು ದಿನ ಶಾಲೆಗೆ ಸ್ನ್ಯಾಕ್ಸ್ ತೆಗೆದುಕೊಂಡು ಹೋಗಿದ್ದಳಂತೆ. ಆದ ಶಾಲೆ ಆಡಳಿತ ಮಂಡಳಿಯವರು, ಇದರಿಂದ ಶಾಲೆಯ ಘನತೆ ಹಾಳಾಗುತ್ತದೆ. ಹೀಗೆ ತಿಂಡಿ ಕೊಟ್ಟು ಕಳುಹಿಸಬೇಡಿ ಎಂದು ಆಕೆಯ ತಂದೆ, ತಾಯಿಯನ್ನು ಶಾಲೆಗೆ ಕರೆಯಿಸಿ ತಿಳಿಸಿದ್ದರಂತೆ.
ಆದರೆ, ಬಳಿಕ ಬಾಲಕಿಯ ತಾಯಿ ಕವಿತಾ, ಪ್ರಾಂಶುಪಾಲರ ಧೋರಣೆ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಇದೇ ಕಾರಣಕ್ಕೆ ಮಗಳಿಗೆ ಮಾನಸಿಕ ಒತ್ತಡ ಹಾಕಲಾಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮಳೆ ಬೆಳೆ ಸಂಪಾಯಿತಲೆ ಪರಾಕ್: ಮೈಲಾರದಲ್ಲಿ ಅದ್ಧೂರಿ ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತರು
ಮೊನ್ನೆ ತಾನೆ ಶಾಲೆಗೆ ತೆರಳಿ ಪರೀಕ್ಷೆ ಬರೆದು ಬಂದಿದ್ದ ಬಾಲಕಿ, ನಿನ್ನೆ ಸಾವಿನ ಮನೆ ಸೇರಿದ್ದಾಳೆ. ನಿತ್ಯ ಬೆಳಗ್ಗೆ ಐದು ಗಂಟೆಗೆ ಎದ್ದು ವಾಕಿಂಗ್ಗೆ ತೆರಳಿ, ದೇವಸ್ಥಾನಕ್ಕೆ ಭೇಟಿ ನೀಡಿ ಬರುತ್ತಿದ್ದಳು. ಅದರಂತೆ ನಿನ್ನೆ ಕೂಡ ವಾಕಿಂಗ್ಗೆ ಅಂತಾ ಎದ್ದು ಹೋಗಿದ್ದು, ಆದರೆ ವಾಪಸ್ ಬಂದಿರಲಿಲ್ಲ. ಬಳಿಕ ಪೋಷಕರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಹಾಗಾಗಿ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ವೇಳೆಗೆ ಶೆಟ್ಟಿಹಳ್ಳಿ ರೈಲ್ವೆ ಟ್ರ್ಯಾಕ್ ಮೇಲೆ ಆಕೆಯ ಮೃತದೇಹ ಸಿಕ್ಕಿದೆ.
'ಐ ಹೇಟ್ ಯೂ ಪ್ರಿನ್ಸಿಪಾಲ್, ಮಾರ್ಕ್ಸ್ ಇಸ್ ನಾಟ್ ಇಂಪಾರ್ಟೆಂಟ್' ಎಂದು ಬಾಲಕಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೊತ್ತಾಗಿದೆ. ಪ್ರಕರಣ ಸಂಬಂಧ ಸೌಂದರ್ಯ ಎಜುಕೇಷನಲ್ ಟ್ರಸ್ಟ್ಗೆ ಕೇಳಲು ಹೋದರೆ ಪ್ರಾಂಶುಪಾಲರು ಇಲ್ಲ ರಜೆಯಲ್ಲಿದ್ದಾರೆ ಅಂತಾ ಸಿಬ್ಬಂದಿ ಹೇಳಿದ್ದಾರೆ. ಸದ್ಯ ಘಟನೆ ಸಂಬಂಧ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.