ಬೆಂಗಳೂರು: ವಾಣಿವಿಲಾಸ ವೈದ್ಯಕೀಯ ಸಿಬ್ಬಂದಿಯಿಂದ ಗದ್ದಲ ಹಿನ್ನೆಲೆ ವಾಣಿ ವಿಲಾಸ್ ಆಸ್ಪತ್ರೆಗೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಆನಂತರ ಅಧಿಕಾರಿಗಳು, ವೈದ್ಯರು ಮತ್ತು ಇತರ ಸಿಬ್ಬಂದಿ ಜೊತೆ ಚರ್ಚಿಸಿ ಈ ಸಂಬಂಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದಾಗಿ ಭರವಸೆ ನೀಡಿದರು.
ಕೊರೊನಾ ಯೋಧರ ಆರೋಗ್ಯ ಮತ್ತು ಕ್ಷೇಮವೇ ನಮ್ಮ ಪ್ರಥಮ ಆದ್ಯತೆ ಎಂದು ಹೇಳಿದ ಡಾ. ಸುಧಾಕರ್, ಗದ್ದಲವಾದಾಗ ಯಾಕೆ ಡೀನ್ ಗಮನಕ್ಕೆ ತಂದಿಲ್ಲ ಎಂದು ವೈದ್ಯಕೀಯ ಸಿಬ್ಬಂದಿಯನ್ನು ಪ್ರಶ್ನಿಸಿದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಈ ವೇಳೆ ಸ್ಪಷ್ಟಪಡಿಸಿದರು.
ಇನ್ನೂ ವಿದೇಶದಿಂದ ಹಿಂತಿರುಗಲಿರುವ ಕನ್ನಡಿಗರ ವಿಚಾರವಾಗಿ ಮಾತಾನಾಡಿದ ಅವರು, ಈಗಾಗಲೇ 6500 ಮಂದಿ ಬರುವ ಬಗ್ಗೆ ಮಾಹಿತಿ ಇದೆ. ಪ್ರತಿಯೊಬ್ಬರನ್ನೂ ಕ್ವಾರಂಟೈನ್ ಮಾಡಲಾಗುತ್ತೆ. 14 ದಿನದ ಕ್ವಾರಂಟೈನ್ ಅವಧಿಯಲ್ಲಿ 2 ಬಾರಿ ಕೊರೊನಾ ಟೆಸ್ಟ್ ಮಾಡಿಸಲಾಗುತ್ತೆ. 14 ದಿನಗಳ ಬಳಿಕ ಮನೆಯಲ್ಲಿ 14 ದಿನ ಅವರು ಇರಬೇಕಾಗುತ್ತೆ. ಈ ಬಗ್ಗೆ ಯಾವುದೇ ಆತಂಕ ಬೇಡ, ರಾಜ್ಯದಲ್ಲಿ ದೇಶದಲ್ಲೇ ಅತಿಹೆಚ್ಚು ಕೊರೊನಾ ಟೆಸ್ಟ್ ಮಾಡಲಾಗ್ತಿದೆ. ರಾಜ್ಯದ ಕೆಲಸಕ್ಕೆ ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.