ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ಪಾಲಿಸುವಲ್ಲಿ ಸಾರ್ವಜನಿಕರ ನಿರ್ಲಕ್ಷ್ಯ ಹೆಚ್ಚಾದ ಹಿನ್ನೆಲೆ ಸರ್ಕಾರ ಮಾಸ್ಕ್ ಧರಿಸದಿರುವವರ ವಿರುದ್ಧದ ದಂಡದ ಪ್ರಮಾಣವನ್ನು 1000 ರೂ.ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಆದರೆ, ಅದರ ಬೆನ್ನಲ್ಲೇ ಗೊಂದಲಗಳೂ ಹೆಚ್ಚಾಗಿವೆ.
ಮಾಸ್ಕ್ ದಂಡದ ಹೊಸ ನಿಯಮದ ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿರುವವರ ವಿರುದ್ಧ ನಗರ ವ್ಯಾಪ್ತಿಯಲ್ಲಿ 1,000 ರೂ., ಗ್ರಾಮೀಣ ಭಾಗದಲ್ಲಿ 500 ರೂ.ಗೆ ದಂಡದ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಹೊಸ ಆದೇಶದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮಾಸ್ಕ್ ಧಾರಣೆ ಕಡ್ಡಾಯವಾಗಿದೆ. ಜೊತೆಗೆ ಮಾಸ್ಕ್ ಹಾಕುವಾಗ ಮೂಗು, ಬಾಯಿ ಸಂಪೂರ್ಣವಾಗಿ ಮುಚ್ಚಿರಬೇಕು.
ಈ ಮುಂಚೆ ಸರ್ಕಾರ ಮಾಸ್ಕ್ ಧರಿಸದೇ ಇರುವವರ ಮೇಲೆ 200 ರೂ.ದಂಡ ವಿಧಿಸುತ್ತಿತ್ತು. ಆದರೆ, ಸಾರ್ವಜನಿಕರು ಮಾಸ್ಕ್ ಧಾರಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿತ್ತು. ಇತ್ತ ಕೋವಿಡ್ ಪ್ರಮಾಣ ವೃದ್ಧಿಸುತ್ತಿರುವ ಹಿನ್ನೆಲೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ ಸರ್ಕಾರ ದಂಡದ ಮೊತ್ತವನ್ನು ಗರಿಷ್ಠ 1000 ರೂ.ಗೆ ಹೆಚ್ಚಳ ಮಾಡಿತು. ಈ ದಂಡವನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಸಂಗ್ರಹಿಸುವಂತೆ ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಸುಮಾರು 250 ಮಾರ್ಷಲ್ಗಳನ್ನು ಇದಕ್ಕಾಗಿ ನಿಯೋಜಿಸಲಾಗಿದೆ. ಮಾಸ್ಕ್ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಇನ್ನಷ್ಟು ಮಾರ್ಷಲ್ಗಳನ್ನು ಸೇರ್ಪಡೆಗೊಳಿಸಲು ಯೋಜಿಸಿದೆ. ಸುಮಾರು 60 ಮಾರ್ಷಲ್ಗಳನ್ನು ಮಾಸ್ಕ್ ಧರಿಸದವರ ಮೇಲೆ ಕ್ರಮ ಕೈಗೊಳ್ಳಲೆಂದೇ ನೇಮಕಾತಿ ಮಾಡುವ ಪ್ರಸ್ತಾಪ ಇದೆ.
ಮಾರ್ಷಲ್ಗಳ ಜೊತೆ ಸಂಘರ್ಷ:
ದುಬಾರಿ ದಂಡ ವಿಧಿಸುವ ಕ್ರಮದಿಂದ ಸಾರ್ವಜನಿಕರು ಹಾಗೂ ಮಾರ್ಷಲ್ಗಳ ಮಧ್ಯೆ ಸಂಘರ್ಷದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಸಾವಿರ ರೂ. ದಂಡ ಪ್ರಯೋಗ ಪೊಲೀಸ್ ಸಿಬ್ಬಂದಿ ಹಾಗೂ ಮಾರ್ಷಲ್ಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಹೂಡಿಯಲ್ಲಿ ಇಬ್ಬರು ಬೈಕ್ ಸವಾರರು ದಂಡ ವಿಧಿಸಿದ್ದಕ್ಕೆ ಮಾರ್ಷಲ್ಗಳ ಮೇಲೆನೇ ಹಲ್ಲೆ ನಡೆಸಿದ್ದರು. ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ, ಮಾರ್ಷಲ್ಗಳ ನಡುವೆ ದಂಡ ವಿಧಿಸುತ್ತಿರುವ ಸಂಬಂಧ ಪದೇ ಪದೆ ಸಂಘರ್ಷ ಏರ್ಪಡುತ್ತಿದೆ. ಅನೇಕರು ದುಬಾರಿ ಸಾವಿರ ರೂ. ದಂಡ ಪಾವತಿಸಲು ನಿರಾಕರಿಸುತ್ತಿದ್ದಾರೆ. ಇದರಿಂದ ಸಿಬ್ಬಂದಿಗೆ ದಂಡ ವಸೂಲಿ ಕಷ್ಟಕರವಾಗಿ ಪರಿಣಮಿಸಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ಜೊತೆಗೂಡಿ ಮಾರ್ಷಲ್ಗಳು ಫೀಲ್ಡಿಗಿಳಿಯುತ್ತಿದ್ದಾರೆ.
ಮಾಸ್ಕ್ ದಂಡದ ಗೊಂದಲ:
ಮಾಸ್ಕ್ ಧಾರಣೆ ಮತ್ತು ದಂಡ ವಿಧಿಸುತ್ತಿರುವ ಬಗ್ಗೆ ಸಾಕಷ್ಟು ಗೊಂದಲ ಮೂಡಿದೆ. ಕಿಟಕಿ ಗಾಜು ಮುಚ್ಚಿ ಒಬ್ಬನೇ ಕಾರು ಚಲಾಯಿಸುವವನು ಮಾಸ್ಕ್ ಧರಿಸಬೇಕೇ? ಕಿಟಕಿ ಗಾಜು ಮುಚ್ಚದೇ ಕಾರು ಚಲಾಯಿಸುವವನು ಮಾಸ್ಕ್ ಧರಿಸಬೇಕೇ? ದ್ವಿ ಚಕ್ರವಾಹನದಲ್ಲಿ ಹಿಂಬದಿ ಸವಾರನಿಲ್ಲದೆ ಹೋಗುವವನು ಮಾಸ್ಕ್ ಧರಿಸಬೇಕೇ? ಎಂಬ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿದೆ. ಆರೋಗ್ಯ ಇಲಾಖೆ ಹೇಳಿರುವಂತೆ ಕಾರಿನಲ್ಲಿ ಒಬ್ಬಂಟಿಯಾಗಿ ಹೋಗುವವನಿಗೆ ಮಾಸ್ಕ್ ಧಾರಣೆ ಕಡ್ಡಾಯವಲ್ಲ. ಅದೇ ರೀತಿ ಕಿಟಕಿ ಗಾಜು ಮುಚ್ಚಿ ಕಾರು ಚಲಾಯಿಸುವವನೂ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ. ಎಲ್ಲಾ ದ್ವಿಚಕ್ರವಾಹನ ಸವಾರರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಆದರೆ, ಕೆಲ ಮಾರ್ಷಲ್ಗಳು ಮತ್ತು ಪೊಲೀಸರು ಬೇಕಾಬಿಟ್ಟಿ ದಂಡ ವಿಧಿಸುತ್ತಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸ್ಪಷ್ಟ ನಿರ್ದೇಶನ ಇದ್ದರೂ ಸವಾರರಿಗೆ ಪೊಲೀಸರು ದಂಡ ವಿಧಿಸುತ್ತಿರುವ ಪ್ರಕರಣ ವರದಿಯಾಗುತ್ತಿದೆ. ಈ ಸಂಬಂಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮತ್ತೊಮ್ಮೆ ಸರ್ಕಾರ ಮಾಸ್ಕ್ ಧಾರಣೆ ಸಂಬಂಧ ಸ್ಪಷ್ಟ ನಿರ್ದೇಶನ ನೀಡುವಂತೆ ಆಗ್ರಹಿಸಿದ್ದಾರೆ.