ಬೆಂಗಳೂರು: "ತಾರತಮ್ಯ ನೀತಿಗಳನ್ನು ತೊಡೆದು ಹಾಕುವುದು, ಸಮಾನ ಅವಕಾಶ ಕಲ್ಪಿಸುವುದು ಮತ್ತು ತುಳಿತಕ್ಕೊಳಗಾದವರ ಸಬಲೀಕರಣ ನ್ಯಾಯಾಂಗ ವ್ಯವಸ್ಥೆಯ ಮುಖ್ಯ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಸಮಾಜದ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ದೇಶದ ಸರ್ವೋಚ್ಚ ನ್ಯಾಯಾಲಯ ಸದಾ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿದೆ" ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ದಿವಂಗತ ನ್ಯಾಯಮೂರ್ತಿ ಇ.ಎಸ್.ವೆಂಕಟರಾಮಯ್ಯ ಅವರ ಸ್ಮರಣಾರ್ಥ ಶತಮಾನೋತ್ಸವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಸಾಮಾಜಿಕ ಮತ್ತು ಖಾಸಗಿ ವಲಯದಲ್ಲಿ ನಿಜವಾದ ಸಮಾನತೆಯನ್ನು ಸಾಧಿಸಲು ವಾಸ್ತವಗಳ ಹಿನ್ನೆಲೆ ಅರ್ಥಮಾಡಿಕೊಳ್ಳಬೇಕಿದೆ. ನಂತರ ಅಸಮತೋಲನವನ್ನು ನಿವಾರಿಸುವುದು ಅತ್ಯಗತ್ಯವಾಗಿದೆ" ಎಂದು ತಿಳಿಸಿದರು.
"ನಮ್ಮ ಕಾನೂನುಗಳು ಸಾರ್ವಜನಿಕ ಮತ್ತು ಖಾಸಗಿಯಾಗಿ ನೆಡೆಯುವ ತಾರತಮ್ಯವನ್ನು ನಿವಾರಿಸುವ ಪ್ರಬಲ ಸಾಧನಗಳಾಗಿವೆ. ಆದರೆ ಕೆಲ ಜನರಿಗೆ ಕಾನೂನು ಸುಲಭವಾಗಿ ಎಟುಕದ ವಿಚಾರವಾಗಿದೆ. ಆದ್ದರಿಂದ ನಮ್ಮ ವ್ಯವಸ್ಥೆಯಲ್ಲಿ ಇನ್ನೂ ತಾರತಮ್ಯ ಇದೆ ಎಂದು ಹೇಳಲು ಬೇಸರವಾಗುತ್ತದೆ. ವಿಕಲಾಂಗ ವ್ಯಕ್ತಿಗಳ ವಿಚಾರದಲ್ಲೂ ನ್ಯಾಯ ಪಡೆಯುವುದು ಕಷ್ಟಕರ ವಿಷಯವಾಗಿದೆ. ಇವೆಲ್ಲವನ್ನೂ ನೋಡಿದರೆ ಸಮಾನ ಕಾನೂನು ಮತ್ತು ಅದರ ರಕ್ಷಣೆ ನಡೆಯುತ್ತಿದೆಯೇ ಎನ್ನುವ ಅನುಮಾನ ಮೂಡುತ್ತದೆ" ಎಂದು ಬೇಸರ ವ್ಯಕ್ತಪಡಿಸಿದರು.
"2023ರ ಸುಪ್ರೀಂ ಕೋರ್ಟ್ ನ್ಯಾಯಾಂಗ ವರದಿಯ ಪ್ರಕಾರ, ಸುಮಾರು 30 ಪ್ರತಿಶತದಷ್ಟು ನ್ಯಾಯಾಲಯಗಳು ಮಾತ್ರ ಅಂಗವಿಕಲ ವ್ಯಕ್ತಿಗಳಿಗೆ ಶೌಚಾಲಯ, ಪಾದಚಾರಿ ಮಾರ್ಗಗಳು, ಕುರ್ಚಿಗಳ ವ್ಯವಸ್ಥೆಯನ್ನು ಹೊಂದಿವೆ ಎಂದು ಹೇಳಿದೆ. ಅರ್ಜಿದಾರರು ಮತ್ತು ವಕೀಲರು ಪ್ರತಿ ಬಾರಿ ವಿಚಾರಣೆಗೆ ಹಾಜರಾಗಲು ಪಾರ್ಕಿಂಗ್ ಶುಲ್ಕ ಕೂಡ ಪಾವತಿಸಬೇಕಾಗುತ್ತಿದೆ. ಈ ಎಲ್ಲ ತಾರತಮ್ಯವನ್ನು ಹೋಗಲಾಡಿಸಲು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಹಿಳೆಯರಿಗೆ ಕೋರ್ಟ್ ಆವರಣದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಅಲಭ್ಯತೆ ವ್ಯವಸ್ಥೆಯ ಅಸಮತೋಲನಕ್ಕೆ ಕಾರಣವಾಗಿದೆ. ಹೆಚ್ಚು ಸಮಯ ಮತ್ತು ಹಣವನ್ನು ಹೊಂದಿರುವ ಕಕ್ಷಿದಾರರು ಮತ್ತು ಹೆಚ್ಚು ಶುಲ್ಕ ಪಡೆದ ವಕೀಲರು ಇತರರಿಗೆ ಹೋಲಿಸಿದರೆ ನ್ಯಾಯಾಂಗ ಸೌಲಭ್ಯಗಳನ್ನು ಸುಲಭವಾಗಿ ಪಡೆಯುತ್ತಿದ್ದಾರೆ. ಹಾಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಎಲ್ಲರೂ ಇವುಗಳ ಬಗ್ಗೆ ಯೋಚಿಸಿ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು" ಎಂದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಮಾತನಾಡಿ, "ಕಾಯಕವೇ ಕೈಲಾಸ ಎಂದು ನಂಬಿದ್ದ ನ್ಯಾ.ಇ.ಎಸ್.ವೆಂಕಟರಮಣಯ್ಯ ಅವರು ಕರ್ತವ್ಯ ಬದ್ಧತೆಯಿಂದ ನಡೆದುಕೊಂಡವರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದರೂ ಅವರನ್ನು ತಮ್ಮ ಮಂಡ್ಯದ ಮಣ್ಣಿನ ಬಗ್ಗೆ ಸೆಳೆತವಿತ್ತು. ಸಾಹಿತ್ಯದಲ್ಲಿ ಹೆಚ್ಚು ಆಸಕ್ತರಾಗಿದ್ದ ಅವರು ತಮ್ಮ ಹಲವು ತೀರ್ಪಿನಲ್ಲಿ ಸಂಸ್ಕೃತ, ಕನ್ನಡ ಸಾಹಿತ್ಯದ ಉಲ್ಲೇಖ ಮಾಡುತ್ತಿದ್ದರು" ಎಂದು ಸ್ಮರಿಸಿದರು.
ಇದನ್ನೂ ಓದಿ: ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿದ ಪ್ರಕರಣ ಸಿಐಡಿಗೆ ಹಸ್ತಾಂತರ