ಬೆಂಗಳೂರು : ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಹ್ಯಾಕ್ ಆದ ಮಾತ್ರಕ್ಕೆ ತಂತ್ರಜ್ಞಾನಕ್ಕೆ ನಿರ್ಬಂಧ ಹೇರಲಾಗದು. ನಾವು ಮುಂದೆ ಸಾಗಬೇಕಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಹೈಕೋರ್ಟ್‌ನಲ್ಲಿ ಶನಿವಾರ ಆಯೋಜಿಸಿದ್ದ ಇ-ಇನಿಶಿಯೇಟಿವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಕೆಲವು ಹೈಕೋರ್ಟ್‌ಗಳು ವಿಡಿಯೋ ಕಾನ್ಫರೆನ್ಸ್ ನಿಯಮಗಳನ್ನು ಅಳವಡಿಸಿಕೊಂಡಿವೆ. ಕೆಲ ಹೈಕೋರ್ಟ್‌ಗಳು ಷರತ್ತುಗಳನ್ನು ವಿಧಿಸಿವೆ. ಕರ್ನಾಟಕ ಹೈಕೋರ್ಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ವಿಡಿಯೋ ಹಾಕುವ ಮೂಲಕ ದತ್ತಾಂಶ ಹ್ಯಾಕ್ ಮಾಡಲಾಗಿತ್ತು ಎಂಬುದು ತಿಳಿದಿದೆ. ಇದರಿಂದ ವಿಚಲಿತರಾಗಿದ್ದೆವು. ಆದರೆ, ನಾವು ಮುಂದೆ ಸಾಗಬೇಕಿದೆ. ಇಂತಹ ಘಟನೆಯಾದ ಮಾತ್ರಕ್ಕೆ ನಾವು ತಂತ್ರಜ್ಞಾನವನ್ನು ನಿರ್ಬಂಧಿಸಲಾಗದು. ನಮ್ಮ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ, ಏನಾದರೂ ಸಮಸ್ಯೆಯಾದರೆ ಅದನ್ನು ಪರಿಹರಿಸಬೇಕು ಎಂದರು.
ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್‌ನ ಕ್ಲಿಪ್‌ಗಳನ್ನು ಆನ್‌ಲೈನ್‌ನಲ್ಲಿ ನೀವು ನೋಡಿರುತ್ತೀರಿ. ಇದನ್ನು ನಾವು ಒಪ್ಪಿಕೊಳ್ಳಬೇಕಿದೆ. ಪ್ರತಿ ತಕ್ಷಣವೂ ನಮ್ಮ ಮೇಲೆ ನಿಗಾ ಇಟ್ಟಿರಲಾಗುತ್ತದೆ. ನಮ್ಮನ್ನು ವಿಡಿಯೋ, ಆಡಿಯೋ ರೆಕಾರ್ಡ್ ಮಾಡಲಾಗುತ್ತಿರುತ್ತದೆ. ಎನ್‌ಐಸಿ ಕ್ಲೌಡ್ ಸಿಸ್ಟಂಗೆ ವರ್ಗಾವಣೆಯಾಗುವಾಗ ಅದು ತಪ್ಪಲಿದೆ ಎಂದರು.
ಪ್ರಸಕ್ತ ವರ್ಷದಲ್ಲಿ ಕರ್ನಾಟಕದ ನ್ಯಾಯಾಂಗವು 1,69,46,085 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ನ್ಯಾಯಮೂರ್ತಿಗಳು ತಂತ್ರಜ್ಞಾನವನ್ನು ಹೆಚ್ಚು ತಿಳಿದುಕೊಂಡರೆ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದು. ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಬಾಕಿ ಪ್ರಕರಣಗಳು ಇವೆ ಎಂಬುದರ ಮೇಲೆ ನಿಗಾ ಇಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿದರು.
ಕಾಗದದಿಂದ ವಿದ್ಯುನ್ಮಾನ ವ್ಯವಸ್ಥೆಗೆ ವರ್ಗಾವಣೆಯಾಗುವುದು ಮಾತ್ರವಲ್ಲದೇ, ಭಾರತದ ನ್ಯಾಯಾಂಗವನ್ನು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸಹಾಯದಿಂದ ಡಿಜಿಟಲ್ ಯುಗಕ್ಕೆ ಕೊಂಡೊಯ್ಯುವ ಗುರಿಯನ್ನು ಸಾಧಿಸಬೇಕು. ಕೆಲವು ನ್ಯಾಯಮೂರ್ತಿಗಳಿಗೆ ತಂತ್ರಜ್ಞಾನ ಗೊತ್ತಿದೆ. ಉಳಿದವರಿಗೆ ಅಷ್ಟು ಗೊತ್ತಿಲ್ಲದೇ ಇರಬಹುದು. ನಮ್ಮ ಪ್ರಕ್ರಿಯೆಯ ಅವಿಭಾಜ್ಯ ಅಂಗ ತಂತ್ರಜ್ಞಾನ, ಇದನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವದ ವಿವಿಧ ದೇಶಗಳೊಂದಿಗೆ ಹೋಲಿಕೆ ಮಾಡಿದರೆ ಜನರು ನ್ಯಾಯಾಲಯದ ಬಾಗಿಲು ತಟ್ಟುವ ವಿಚಾರದಲ್ಲಿ ಭಾರತವು ವಿಭಿನ್ನ ಸವಾಲು ಎದುರಿಸುತ್ತಿದೆ. ತಂತ್ರಜ್ಞಾನದ ಬಳಕೆಯಿಂದ ಜನರನ್ನು ನ್ಯಾಯಾಲಯದ ಸಮೀಪಕ್ಕೆ ಕರೆತಂದರೂ ಭಾಷೆಯ ಸಮಸ್ಯೆಯಿಂದ ಅವರಿಗೆ ಕಲಾಪ ಅರ್ಥವಾಗದಿರುವುದು ಬಹುದೊಡ್ಡ ತೊಂದರೆಯಾಗಿದೆ ಎಂದರು.
ಇದನ್ನೂ ಓದಿ : ಅತ್ಯಾಚಾರ ಸಂತ್ರಸ್ತೆಯರ ಗರ್ಭಪಾತ ವಿಚಾರ : ತಜ್ಞರ ಸಮಿತಿ ರಚಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮಾತನಾಡಿ, ಹೈಕೋರ್ಟ್‌ನ ವೆಬ್‌ಸೈಟ್ ಅನ್ನು ಹೊಸ ಫೀಚರ್‌ಗಳೊಂದಿಗೆ ರೂಪಿಸಲಾಗಿದೆ. ಇ-ಇನಿಶಿಯೇಟಿವ್ ಭಾಗವಾಗಿ ವಕೀಲರಿಗೆ ಅಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ರೂಪಿಸಲಾಗಿದೆ. ನ್ಯಾಯಮೂರ್ತಿಗಳಿಗೆ ಡ್ಯಾಷ್‌ಬೋರ್ಡ್ ವರ್ಗಾವಣೆ, ಐಎಲ್‌ಆರ್ ಆನ್‌ಲೈನ್ ಮೂಲಕ ಇ-ಐಎಲ್‌ಆರ್, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆರು ಜಿಲ್ಲೆ ನ್ಯಾಯಾಲಯಗಳಲ್ಲಿ ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಈ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ, ಅರವಿಂದ್ ಕುಮಾರ್ ಮತ್ತು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಭಾಗವಹಿಸಿದ್ದರು.