ಬೆಂಗಳೂರು: ನಗರದಲ್ಲಿ ನಿತ್ಯ ಕೋವಿಡ್ ಉಲ್ಬಣಗೊಳ್ಳುತ್ತಿದ್ದು, 35,789 ಸೋಂಕಿತರು ಆಸ್ಪತ್ರೆ ಹಾಗೂ ಮನೆಗಳಲ್ಲಿ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ನಿತ್ಯ ಮನೆಯಿಂದ ಕಸ ತೆಗೆದುಕೊಳ್ಳುತ್ತಿರುವ ಪೌರಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗಿದೆ.
ಕಳೆದ ವರ್ಷ ಕಂಟೇನ್ಮೆಂಟ್ ಝೋನ್ಗಳ ಕಸ ತಗೆದುಕೊಳ್ಳುವ ಪೌರಕಾರ್ಮಿಕರಿಗೆ ಪಿಪಿಇ ಕಿಟ್ ನೀಡಲಾಗಿತ್ತು. ಆದರೆ, ಈ ಬಾರಿ 48 ಕಂಟೇನ್ಮೆಂಟ್ ಝೋನ್ಗಳಿದ್ದರೂ ಪೌರಕಾರ್ಮಿಕರಿಗೆ ಯಾವುದೇ ಸುರಕ್ಷತಾ ವ್ಯವಸ್ಥೆ ಮಾಡಿಲ್ಲ. ಕಳೆದ ಎರಡು ಮೂರು ದಿನಗಳಿಂದ ಧರ್ಮರಾಯ ಟೆಂಪಲ್ ವಾರ್ಡ್ನಲ್ಲಿ 95 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ಜನ ಹೋಂ ಕ್ವಾರಂಟೈನ್ನಲ್ಲೇ ಇದ್ದಾರೆ. ಆದರೆ, ಈ ಮನೆಗಳಿಂದ ಕಸ ತೆಗೆದುಕೊಳ್ಳುತ್ತಿರುವ ಪೌರಕಾರ್ಮಿಕರಿಗೆ ಯಾವುದೇ ರೀತಿಯ ರಕ್ಷಣೆ ನೀಡಿಲ್ಲ. ಕೋವಿಡ್ ಎರಡನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ಜೀವ ಭಯದಲ್ಲೇ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ.
ಓದಿ : ಚಾಮರಾಜನಗರದಲ್ಲಿ 90 ಸಾವಿರ ಮಂದಿಗೆ ಲಸಿಕೆ... ಕೋವಿಡ್ ಕೇರ್ ಸೆಂಟರ್ಗಳು ಪುನಾರಂಭಕ್ಕೆ ಸಿದ್ಧತೆ
ಕಳೆದ ಬಾರಿಯ ಹಾಗೆ ಬ್ಯಾರಿಕೇಡ್ ಹಾಕಿ ಕಂಟೇನ್ಮೆಂಟ್ ಮಾಡಿದರೆ ಪೌರಕಾರ್ಮಿಕರಿಗೆ ಕಸ ಸ್ವೀಕರಿಸಲು ಪಿಪಿಇ ಕಿಟ್ ಕೊಡಲಾಗುವುದು. ಆದರೆ, ನಗರದಲ್ಲಿ ಆ ರೀತಿ ಕಂಟೇನ್ಮೆಂಟ್ ಮಾಡಲಾಗುತ್ತಿಲ್ಲ ಎಂದು ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರಾದ ರಂದೀಪ್ ತಿಳಿಸಿದ್ದಾರೆ.
ಪೌರಕಾರ್ಮಿಕ ಮುಖಂಡರಾದ ಅಶೋಕ್ ಸಾಲಪ್ಪ ಮಾತನಾಡಿ, ನೇರ ವೇತನ ಪೌರಕಾರ್ಮಿಕರು, ಕಾಯಂ ಪೌರಕಾರ್ಮಿಕರು ಪ್ರಾಣ ಒತ್ತೆ ಇಟ್ಟು ಕೆಲಸ ಮಾಡ್ತಿದ್ದಾರೆ. ಕಳೆದ ಬಾರಿ ಮೃತಪಟ್ಟವರಿಗೂ ಕೋವಿಡ್ ವಿಮೆ ಪರಿಹಾರ ಕೊಟ್ಟಿಲ್ಲ. ಬಿಬಿಎಂಪಿಗೆ ಜೊತೆ ಎಷ್ಟೇ ಬಾರಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ.