ಬೆಂಗಳೂರು: ಸ್ಯಾಂಡಲ್ವುಡ್ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಿಧನರಾಗಿ 12 ದಿನಗಳು ಕಳೆದಿವೆ. ಮುದ್ದಿನ ಮಗನನ್ನು ಕಳೆದುಕೊಂಡ ಸರ್ಜಾ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಜೊತೆಗೆ ನೆಚ್ಚಿನ ನಟನ ಕಳೆದುಕೊಂಡ ದುಃಖದಲ್ಲಿ ಅಭಿಮಾನಿಗಳು ಇದ್ದಾರೆ. ಈ ನೋವಿನ ನಡುವೆ ಚಿರು ಅಭಿಮಾನಿಗಳಿಗೆ ನಗರ ಪೊಲೀಸರು ಶಾಕ್ ನೀಡಿದ್ದಾರೆ.
ಚಿರು ನಿಧನರಾದ ದಿನ ಮತ್ತು ಅಂತ್ಯಸಂಸ್ಕಾರದ ದಿನ ಅಭಿಮಾನಿಗಳು ಸಾಮಜಿಕ ಅಂತರ ಕಾಯ್ದುಕೊಳ್ಳದೆ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ. ಈ ಸಂಬಂಧ ಜಯನಗರ, ತಲಘಟ್ಟಪುರ ಹಾಗೂ ಬನಶಂಕರಿ ಮೂರು ಠಾಣೆಗಳಲ್ಲಿ ಪೊಲೀಸರೇ ಸ್ವಯಂ ಪ್ರೇರಣೆಯಿಂದ ಚಿರು ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಕೊರೊನಾ ಭೀತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ, ಶುಭಕಾರ್ಯಗಳು ಹಾಗೂ ಅಂತ್ಯ ಸಂಸ್ಕಾರದ ವೇಳೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಚಿರು ನಿಧನರಾದ ದಿನ ಮತ್ತು ಅಂತ್ಯಸಂಸ್ಕಾರದ ದಿನ ಅಭಿಮಾನಿಗಳು ಸಾಮಜಿಕ ಅಂತರ ಕಾಯ್ದುಕೊಳ್ಳದೆ ಸರ್ಕಾರ ಆದೇಶ ಉಲ್ಲಂಘಿಸಿದ್ದಾರೆ.
ಇದಲ್ಲದೆ ಚಿರು ನಿಧನದ ಬಳಿಕ ರಾಘವೇಂದ್ರ ರಾಜ್ ಕುಮಾರ್ ಕುಟುಂಬ ಚಿರಂಜೀವಿ ಸರ್ಜಾ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದರು. ಆ ವೇಳೆ ರಾಘವೇಂದ್ರರಾಜ್ ಕುಮಾರ್ ಮಾಸ್ಕ್ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸರ್ಕಾರದ ಅದೇಶ ಉಲ್ಲಘಿಸಿದ್ದಾರೆ ಎಂದು ವಕೀಲ ಜಿ.ಆರ್ ಮೋಹನ್ ಎಂಬುವರು ಹೈ ಕೋರ್ಟ್ನಲ್ಲಿ ದೂರು ದಾಖಲಿಸಿದ್ದಾರೆ.