ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೆಚ್ಚುವರಿ ಆಯುಕ್ತ ರವಿಕಾಂತೇಗೌಡ, ಸಂಚಾರಿ ಠಾಣಾ ಇನ್ಸ್ಪೆಕ್ಟರ್, ಎಸಿಪಿ ಹಾಗೂ ಡಿಸಿಪಿಗಳೊಂದಿಗೆ ನಗರದ ನಿಮ್ಹಾನ್ಸ್ ಸಂಭಾಗಣದಲ್ಲಿ ಸುಧೀರ್ಘ ಸಭೆ ನಡೆಸಿದ್ದಾರೆ.
ನಗರದಲ್ಲಿ ಸಂಚಾರಿ ದಟ್ಟಣೆ ನಿಯಂತ್ರಿಸಲು ಸದ್ಯ ಇರುವ ಸಿಬ್ಬಂದಿಯನ್ನ ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ನಗರದಲ್ಲಿ ಅಪಘಾತಗಳನ್ನು ನಿಯಂತ್ರಿಸಲು ಸಂಚಾರಿ ಪೊಲೀಸರು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಭೆಯಲ್ಲಿ ಆಯುಕ್ತ ಕಮಲ್ ಪಂತ್ ಸಂಚಾರಿ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹಾಗೂ ಡಿಸಿಪಿ, ಇನ್ಸ್ಪೆಕ್ಟರ್ಗಳಿಗೆ ಸೂಚನೆ ನೀಡಿದರು.
ಆಯಾ ಠಾಣೆಯ ಅವೈಜ್ಞಾನಿಕ ರಸ್ತೆ ಹಂಪ್, ರಸ್ತೆ ಗುಂಡಿ, ಬೀದಿ ದೀಪಗಳನ್ನು ಸಂಬಂದಿಸಿದ ಇಲಾಖೆ ಗಮನಕ್ಕೆ ತಂದು ಸರಿ ಪಡಿಸಿ. ಸಂಚಾರಿ ನಿಯಮ ಉಲ್ಲಂಘಿಸಿದ ಸವಾರರೊಂದಿಗೆ ಸೌಜನ್ಯದಿಂದ ವರ್ತಿಸಿ. ಸಂಚಾರಿ ನಿಯಮ ಉಲ್ಲಂಘನೆ ಕಂಡು ಬಂದ ಕೂಡಲೇ ಕೇಸ್ ದಾಖಲಿಸಿ. ಆದಷ್ಟು ಸಿಬ್ಬಂದಿ ತಂತ್ರಜ್ಞಾನ ಬಳಸಿಕೊಂಡು ದಂಡ ವಸೂಲಿ ಮಾಡಿ ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ, ನಗರ ಸಂಚಾರಿ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ ನಿಯಮ ಉಲ್ಲಂಘನೆ ತಡೆಯಲು ಹೊಸ ನಿಯಮವನ್ನು ಪ್ರಸ್ತಾಪಿಸಿದ್ದಾರೆ. ವಾಹನಗಳು ಆರ್ಟಿಒ ದಿಂದ ಎಫ್ಸಿ ಮತ್ತು ಇಶ್ಯೂರೆನ್ಸ್ ರಿನಿವಲ್ ಮಾಡಿಸುವ ವೇಳೆ ಸಂಚಾರಿ ನಿಯಮ ಉಲ್ಲಂಘನೆ ಇರುವ ವಾಹನ ಇದ್ರೆ ದಂಡ ಪಾವತಿಸದ ವಾಹನಗಳ ಎಫ್ಸಿ ಮತ್ತು ಇಶ್ಯೂರೆನ್ಸ್ ರಿನಿವಲ್ಗೆ ಅವಕಾಶ ನೀಡದಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯಬೇಕು. ಈಗಾಗಲೇ ಸರ್ಕಾರದ ಮುಂದೆ ಈ ಪ್ರಸ್ತಾವನೆ ಇಡಲಾಗಿದೆ ಎಂದಿದ್ದಾರೆ.
ಸದ್ಯ ನಗರದಲ್ಲಿ ಬಹಳಷ್ಟು ಜನಸಂಖ್ಯೆ ಇರುವ ಕಾರಣ ಟ್ರಾಫಿಕ್ ಹಾಗೂ ಸಿಟಿಯನ್ನ ಗಂಭೀರವಾಗಿ ತೆಗೆದುಕೊಂಡು ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದ್ದಾರೆ.