ಬೆಂಗಳೂರು: ಗಲಾಟೆ ಬಿಡಿಸಲು ಹೋದ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಪರಿಣಾಮ ಗಾಯಗೊಂಡು ಆಸ್ಪತ್ರೆಯಲ್ಲಿರುವ ಪೊಲೀಸ್ ಮುಖ್ಯ ಪೇದೆಯ ಆರೋಗ್ಯವನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿಚಾರಿಸಿದರು.
ಶನಿವಾರ ಗಾಯಗೊಂಡ ನಾಗರಾಜ್ ಅವರನ್ನು ತಕ್ಷಣ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನಂತರ ರಾಮಯ್ಯ ವೈದ್ಯರ ಬಳಿ ಸಿಬ್ಬಂದಿಯ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಣೆ ನಡೆಸಿದರು.
ನಂತರ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೊಲೀಸರ ಮೇಲೆ ಚಾಕು ಇರಿದ್ರೆ ಸುಮ್ಮನೆ ಇರಲ್ಲ. ಸದ್ಯ ನಾಗರಾಜ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಘಟನೆಗಳನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಪೊಲೀಸ್ ಸಿಬ್ಬಂದಿ ಭಯ ಪಡಬೇಕಿಲ್ಲ. ನಾನೂ ಸೇರಿದಂತೆ ಎಲ್ಲಾ ಪೊಲೀಸ್ ಸಿಬ್ಬಂದಿ ನಾಗರಾಜ್ ಕುಟುಂಬದ ಜೊತೆ ಇದ್ದೇವೆ. ಪೊಲೀಸರೆಲ್ಲರೂ ನನ್ನ ಕುಟುಂಬದವರೇ, ಯಾರೂ ಕುಗ್ಗದೆ ಕೆಲಸ ಮಾಡಿ ಎಂದು ಅವರು ತಿಳಿಸಿದರು.
ಘಟನೆ ಹಿನ್ನೆಲೆ: ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದಲ್ಲಿ ಯಾವುದೋ ಗುಂಪಿನ ನಡುವೆ ನಿನ್ನೆ ಗಲಾಟೆ ನಡೆಯುವಾಗ ಸಾರ್ವಜನಿಕರು ಕೂಡಲೇ ಆರ್.ಟಿ.ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸಿವಿಲ್ ಡ್ರೆಸ್ನಲ್ಲಿದ್ದ ನಾಗರಾಜ್ ಸ್ಥಳಕ್ಕೆ ತೆರಳಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಗುಂಪಿನಲ್ಲಿದ್ದ ಓರ್ವ ಕೋಪದಿಂದ ನಾಗರಾಜ್ ಹೊಟ್ಟೆಗೆ ಎರಡು ಬಾರಿ ಇರಿದು ಪರಾರಿಯಾಗಿದ್ದ, ಸದ್ಯ ಆರೋಪಿಗಳಿಗೆ ಶೋಧ ಮುಂದುವರೆದಿದೆ.