ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವಾಗ ಅಗೌರವ ತೋರಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆ, ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಆಯಾ ಧರ್ಮಗಳ ಸಂಪ್ರದಾಯದಂತೆ ಗೌರವದಿಂದ ನಡೆಸಿಕೊಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸುತ್ತೋಲೆ ಹೊರಡಿಸಿದೆ.
ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಸೂಕ್ತವಾಗಿ ನಡೆಸುತ್ತಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾದ ಹಿನ್ನೆಲೆ ಸುಪ್ರೀಂಕೋರ್ಟ್ ಅಂತ್ಯಕ್ರಿಯೆ ವಿಧಾನ ಸರಿಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ, ಸೋಂಕಿತರ ಅಂತ್ಯಕ್ರಿಯೆ ಕುರಿತು ಪರಿಷ್ಕೃತ ಮಾರ್ಗ ಸೂಚಿಯನ್ನು ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದೆ.
![Circular for Respectful Funeral](https://etvbharatimages.akamaized.net/etvbharat/prod-images/8226786_535_8226786_1596084048655.png)
ಶ್ವಾಸಕೋಶದಿಂದ ಬರುವ ಉಸಿರಿನ ಕಣಗಳಿಂದ ಕೊರೊನಾ ವೈರಸ್ ಹರಡುತ್ತದೆ. ಸೋಂಕಿತನ ಮೃತದೇಹದಿಂದ ಸೋಂಕು ಹರಡುವುದಿಲ್ಲ. ಹೀಗಾಗಿ, ಅವಸರ ಮತ್ತು ಅನಗತ್ಯ ಗಾಬರಿಯಿಂದ ಮೃತ ದೇಹವನ್ನು ಮುಚ್ಚಿಹಾಕಬಾರದು. ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಧರ್ಮ, ಸಂಸ್ಕೃತಿ, ಸಂಪ್ರದಾಯ ಆಧಾರದಲ್ಲಿ ನಡೆಸಿಕೊಡಬೇಕು. ಅಂತ್ಯಕ್ರಿಯೆ ವೇಳೆ ಹಾಜರಿರುವ ಕುಟುಂಬಸ್ಥರನ್ನು ಗೌರವದಿಂದ ಕಾಣುವ ಜೊತೆಗೆ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕು. ಮೃತಪಟ್ಟವರೆಲ್ಲರಿಗೂ ಸೋಂಕು ಪರೀಕ್ಷೆ ನಡೆಸಬಾರದು. ತೀವ್ರ ಉಸಿರಾಟ ಸಮಸ್ಯೆ ಮತ್ತು ವಿಷಮ ಶೀತ ಜ್ವರ ಲಕ್ಷಣ ಇದ್ದರೆ ಮಾತ್ರ, ಪರೀಕ್ಷೆಗೆ ಎಂದು ಗಂಟಲು ದ್ರವ ಸಂಗ್ರಹಿಸಿ ಅಂತ್ಯಕ್ರಿಯೆಗೆ ಅನುಮತಿ ನೀಡಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.