ಬೆಂಗಳೂರು: ಸಿನಿಮಾ ಪ್ರದರ್ಶನ ಮತ್ತು ಚಿತ್ರೀಕರಣ ಆರಂಭಕ್ಕೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಚಿತ್ರರಂಗದ ನಿಯೋಗ ಮನವಿ ಸಲ್ಲಿಸಿದೆ.
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಸಾ.ರಾ.ಗೋವಿಂದು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ನೇತೃತ್ವದಲ್ಲಿ ಚಿತ್ರರಂಗದ ನಿಯೋಗ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ ಲಾಕ್ಡೌನ್ನಿಂದ ಸ್ಥಗಿತಗೊಂಡಿರುವ ಚಿತ್ರರಂಗದ ಚಟುವಟಿಕೆ ಆರಂಭಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಿದೆ. ಈ ವೇಳೆ ಚಿತ್ರರಂಗ ಎದುರಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿ ಉದ್ಯಮ ಆರಂಭಕ್ಕೆ ಅವಕಾಶ ನೀಡುವಂತೆ ಕೋರಿದೆ. ಮನವಿ ಆಲಿಸಿದ ಸಿಎಂ, ಈ ವಿಚಾರವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸಿಎಂ ಭೇಟಿ ನಂತರ ಮಾತನಾಡಿದ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಜೂನ್ 1ರಿಂದ ಸಿನಿಮಾ ಪ್ರದರ್ಶನ ಮತ್ತು ಚಿತ್ರೀಕರಣ ಆರಂಭಕ್ಕೆ ಅವಕಾಶ ನೀಡಬೇಕು. ಪ್ಯಾಕೇಜ್ನಲ್ಲಿ ಸಿನಿಮಾ ಕಾರ್ಮಿಕರನ್ನು ಸೇರಿಸಬೇಕು ಎಂದು ಮನವಿ ಮಾಡಿದ್ದೇವೆ. ಜೂನ್ 1ರಿಂದ ಸಾಕಷ್ಟು ಉದ್ಯಮ ಆರಂಭಗೊಳ್ಳಲಿದ್ದು, ಚಿತ್ರರಂಗದ ಚಟುವಟಿಕೆಯೂ ಆರಂಭಗೊಳ್ಳಲಿದೆ ಎನ್ನುವ ವಿಶ್ವಾಸವಿದೆ ಎಂದರು.