ಬೆಂಗಳೂರು: ಆರ್‌ಬಿಐ ನಿಯಮ ಉಲ್ಲಂಘಿಸಿ ಸಾಲ ನೀಡುತ್ತಿದ್ದ ಆ್ಯಪ್ ಆಧಾರಿತ 4 ಮೈಕ್ರೊ ಫೈನಾನ್ಸ್ ಕಂಪೆನಿಗಳ ಮೇಲೆ ಸಿಐಡಿ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.
ದಾಳಿ ವೇಳೆ ಸ್ಥಳದಲ್ಲಿದ್ದ ಲ್ಯಾಪ್‌ಟಾಪ್, ಮೊಬೈಲ್, ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮ್ಯಾಡ್ ಎಲಿಫೆಂಟ್ ಟೆಕ್ನಾಲಜೀಸ್ ಪ್ರೈ.ಲಿ., ಬಾರಾಯಾಂಕ್ಸಿ ಟೆಕ್ನಾಲಜೀಸ್ ಪ್ರೈ.ಲಿ., ಪಾಫಿಟೈಸ್ ಟೆಕ್ನಾಲಜೀಸ್ ಪ್ರೈ.ಲಿ., ವಿಝ್‌ಪ್ರೋ ಸಲ್ಯೂಷನ್ ಪ್ರೈ.ಲಿ. ಕಂಪೆನಿಗಳೇ ಸಾರ್ವಜನಿಕರಿಗೆ ಮೋಸ ಮಾಡಿವೆ ಎಂದು ಸಿಐಡಿ ಸೈಬರ್ ಅಪರಾಧ ವಿಭಾಗದಲ್ಲಿ ದೂರು ದಾಖಲಾಗಿದ್ದವು.
ಇಲ್ಲಿ ಗ್ರಾಹಕರ ಮೂಲಭೂತ ವಿವರಗಳನ್ನು ಪಡೆದು ಸಣ್ಣ ಸಾಲ ನೀಡುತ್ತಿದ್ದ ಆ್ಯಪ್ ಆಧಾರಿತ 4 ಮೈಕ್ರೊ ಫೈನ್ಸಾನ್ ಕಂಪೆನಿಗಳು ಮರುಪಾವತಿ ವೇಳೆ ಗ್ರಾಹಕರಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿತ್ತು. ಗ್ರಾಹಕರ ಮೊಬೈಲ್ ಸಂಖ್ಯೆ, ಫೋಟೋ ದುರ್ಬಳಕೆ ಮಾಡಿಕೊಂಡಿರುವುದಾಗಿ ದೂರುಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಮಾಯಕೊಂಡ 'ಕಸ್ಟೋಡಿಯಲ್ ಡೆತ್' ಪ್ರಕರಣ: ಮಹತ್ವದ ಸಾಕ್ಷ್ಯ ಕಲೆ ಹಾಕ್ತಿರುವ ಸಿಐಡಿ
ವಿದೇಶಿ ಮೂಲದ ವ್ಯಕ್ತಿಗಳು ಸಾಲ ನೀಡಲು ಹಣ ಹೂಡಿಕೆ ಮಾಡುತ್ತಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ನಾನ್ ಬ್ಯಾಂಕಿಂಗ್ ಫೈನ್ಸಾನ್ ಆ್ಯಪ್ ಬಳಸಬೇಡಿ ಎಂದು ಸೂಚನೆ ನೀಡಿದ್ದಾರೆ. ಒಂದು ವೇಳೆ ಈ ರೀತಿ ಮೋಸ ಮಾಡಿರುವುದು ಕಂಡುಬಂದಲ್ಲಿ ಸಿಐಡಿ ಸೈಬರ್ ಅಪರಾಧ ವಿಭಾಗವನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.