ಬೆಂಗಳೂರು: ಕಾರಿನಲ್ಲಿ ಖೋಟಾನೋಟು ಸಾಗಿಸುತ್ತಿದ್ದ ನಾಲ್ವರನ್ನು ಸಿಐಡಿ ಪೊಲೀಸರು ಬಂಧಿಸಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಶಿವ, ನಾಗೇಂದ್ರ, ಪ್ರಕಾಶ್, ಲಕ್ಷ್ಮಣ ಬಂಧಿತ ಆರೋಪಿಗಳಾಗಿದ್ದು ಮೂಲತಃ ಇವರು ಚಾಮರಾಜನಗರ ಜಿಲ್ಲೆಯ ಸಿಂಗನೆಲ್ಲೂರು ಗ್ರಾಮದ ನಿವಾಸಿಗಳಾಗಿದ್ದಾರೆ. ದೊಡ್ಡತೋಗುರು ಗ್ರಾಮದ ರಸ್ತೆಯಲ್ಲಿ ಕಾರಿನಲ್ಲಿ 6.80 ಲಕ್ಷ ಮೌಲ್ಯದ 2 ಸಾವಿರ ಮುಖಬೆಲೆಯ 340 ನಕಲಿ ನೋಟುಗಳ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ನೋಟಿನ ಕಟ್ಟಿನ ಮೇಲ್ಭಾಗದಲ್ಲಿ ಮತ್ತು ಕಟ್ಟಿನ ಕೆಳಭಾಗದಲ್ಲಷ್ಟೇ ಅಸಲಿ ನೋಟು ಕಾಣುವಂತಿದ್ದು, ಇದರ ನಡುವೆ ನೋಟಿನ ಆಕಾರದ ಬಿಳಿ ಹಾಳೆಗಳಿದ್ದವು ಎನ್ನಲಾಗ್ತಿದೆ. ಖಚಿತ ಮಾಹಿತಿ ಮೇರೆಗೆ ಕಾರು ಪರಿಶೀಲನೆ ನಡೆಸಿ ಜಪ್ತಿ ಮಾಡಿದಾಗ ಆರೋಪಿಗಳು ನಕಲಿ ನೋಟಿನ ಕಂತೆಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಖೋಟಾ-ನೋಟಿನ ಜಾಲ ಪತ್ತೆ ಹಚ್ಚಲು ಸಿಐಡಿ ಪೊಲೀಸರು ಮುಂದಾಗಿದ್ದಾರೆ.