ಬೆಂಗಳೂರು : ಈ ಬಾರಿ ಕರ್ನಾಟಕದ ವಿಶೇಷತೆಗಳನ್ನು ಫೈರೋಗ್ರಾಫಿ ಮೂಲಕ ಪ್ರಚುರ ಪಡಿಸುವ ಕೆಲಸವನ್ನು 21 ನೆಯ ಚಿತ್ರಸಂತೆಯಲ್ಲಿ ಆರ್ ಆರ್ ನಗರ ಮೂಲದ ಸತೀಶ್ ಬಾಬು ಅವರ ತಂಡ ಪ್ರದರ್ಶನಕ್ಕೆ ಇಟ್ಟಿತ್ತು. ಈ ಕಲೆ ಸಾಕಷ್ಟು ಜನರನ್ನು ಅಯಸ್ಕಾಂತದಂತೆ ಆಕರ್ಶಿಸಿತು. ಮೈಸೂರು ದಸರಾದ ಆನೆ ಅರ್ಜುನನಿಗೆ ನಮನ ಸಲ್ಲಿಸುವಂತಹ ಕಲಾಕೃತಿಯಂತೂ ಭಾವುಕತೆಗೆ ಒಳಗಾಗುವಂತೆ ಮಾಡಿತು.
ಬಿಸಿಯಾದ ಲೋಹದ ತುದಿಯಿಂದ ಮೇಲ್ಮೈಗೆ ವಿನ್ಯಾಸವನ್ನು ಸುಡುವ ಮೂಲಕ ಮರ ಅಥವಾ ಚರ್ಮವನ್ನು ಅಲಂಕರಿಸುವ ಕಲೆ ಅಥವಾ ತಂತ್ರ ಪೈರೋಗ್ರಾಫಿಯಾಗಿದೆ. ಮೂಲತಃ ಯುರೋಪಿನ ಕಲಾ ಪ್ರಕಾರ ಇದಾಗಿದೆ. ಮರದ ತುಂಡುಗಳು ಕೂಡ ಹೊರದೇಶದ್ದಾಗಿದೆ. ಕನಿಷ್ಠ ಮೂರು ದಿನಗಳು ಈ ಕಲೆಯನ್ನು ಪೂರೈಸಲು ತಡೆದುಕೊಳ್ಳುತ್ತದೆ. ಇದನ್ನು ವಿಶೇಷವಾಗಿ ಸತೀಶ್ ಬಾಬು ಚಿತ್ರಸಂತೆಗೆ ತಂದು ಪರಿಚಯಿಸುವ ಕೆಲಸ ಮಾಡಿದ್ದಾರೆ.
ಹೇಗೆ ಸಾಮಾನ್ಯ ಚಿತ್ರಕಲೆಗೆ ಮೊದಲು ಸ್ಕೆಚ್ ಮಾಡಲಾಗುತ್ತದೋ ಹಾಗೆ ಇಲ್ಲಿಯೂ ಚಿತ್ರದ ಪ್ಲಾನ್ ಮಾಡಿಕೊಂಡು ಸಾಫ್ಟ್ವೇರ್ ಮೂಲಕ ಕಟ್ಟಿಂಗ್ ಮಷಿನ್ಗೆ ಸೂಚನೆ ನೀಡಲಾಗುತ್ತದೆ. ಅಲ್ಲಿ ಎಷ್ಟು ತಗ್ಗು ಉಬ್ಬು ಬೇಕು, ಎತ್ತರದ ಅಳತೆ ಕೊರೆಯುವ ಅಟೊಮೇಟೆಡ್ ಯಂತ್ರ ಮಾಡುತ್ತದೆ ಎಂದು ಕಲಾವಿದ ಸತೀಶ್ ಬಾಬು ಮಾಹಿತಿ ನೀಡಿದರು.
ಬರಿ ಮಾರಾಟ ಮಾಡುವ ಉದ್ದೇಶ ನಮ್ಮದಲ್ಲ. ವಿದೇಶದ ಈ ಕಲೆಯನ್ನು ಇಲ್ಲಿನ ಸೊಗಡಿನ ಜೊತೆ ಪರಿಚಯಿಸುವುದು ಉದ್ದೇಶದವಾಗಿದೆ. 30 ಸಾವಿರದಿಂದ 50 ಸಾವಿರದ ವರೆಗೆ ಮೊತ್ತದ ಪೈರೋಗ್ರಾಫಿ ಕಲಾ ಚಿತ್ರಗಳು ಮಾರಾಟಕ್ಕಿದ್ದು ಖರ್ಚು ವೆಚ್ಚಕ್ಕೆ ಹೋಲಿಸಿದರೆ ಈ ಮೊತ್ತ ಅತಿ ಕಡಿಮೆಯಾಗಿದೆ ಎಂದು ಚಿತ್ರ ಕಲಾವಿದ ಸತೀಶ್ ಬಾಬು ಹೇಳಿದ್ದಾರೆ.
ನಾವಿನ್ನೂ ಪ್ರದರ್ಶನ ಅರಂಭ ಮಾಡುವ ಸಮಯದಲ್ಲೇ 2 ರಿಂದ 3 ಕಲಾಕೃತಿಗಳು ಮಾರಾಟವಾದವು. ಈವರೆಗೆ ಸುಮಾರು 30 ರಿಂದ 40 ಪೈರೋಗ್ರಾಫಿ ಕಲಾಕೃತಿ ಚಿತ್ರಗಳನ್ನು ಮಾರಾಟ ಮಾಡಿದ್ದೇವೆ. ಗ್ರಾಹಕರು ಇದನ್ನು ಅತ್ಯಂತ ಸಂಭ್ರಮ, ಸಂತೋಷದಿಂದ ಮನೆಗಳಿಗೆ ತಗೆದುಕೊಂಡು ಹೋಗಿದ್ದಾರೆ ಎಂದು ಸತೀಶ್ ಬಾಬು ಸಂತಸ ಹಂಚಿಕೊಂಡರು.
ಇದು ಪರಿಸರ ಸ್ನೇಹಿ ಝೀರೋ ಇಂಕ್ ಬಳಸುವ ಚಿತ್ರಕಲೆಯಾಗಿದೆ. ಈ ಪ್ರಕಾರ ಹಳೆಯದಾಗುತ್ತಾ ಆಂಟಿಕ್ ಲುಕ್ ನೀಡುತ್ತದೆ. ಕಳೆದ ವರ್ಷ ಮಾಡಿರುವ ಕಲಾಕೃತಿ ಇನ್ನಷ್ಟು ಚೆನ್ನಾಗಿ ಕಾಣುತ್ತದೆ. ಇದು ಬಾಗುವುದು ಮತ್ತು ಮುರಿಯುವ ಫ್ರೇಮ್ ಅಲ್ಲ. ಹುಳ ಬೀಳುವುದು ಆಗುವುದಿಲ್ಲ. ಇದು ಉನ್ನತ ದರ್ಜೆಯ ಮರವಾಗಿರುವುದರಿಂದ ಯಾವುದೇ ಕಾರಣಕ್ಕೂ ಮುರಿಯುವ ಪ್ರಶ್ನೆ ಇಲ್ಲ. 4 ವರ್ಷದಿಂದ ಈ ಕಲೆಯನ್ನು ಉತ್ತಮಗೊಳಿಸುತ್ತ ಬಂದಿದ್ದೇವೆ ಎಂದು ಸತೀಶ್ ಬಾಬು ವಿವರಿಸಿದರು.
ಇದನ್ನೂ ಓದಿ : ಬೆಂಗಳೂರು ಚಿತ್ರಸಂತೆ: ಕಣ್ಮನ ಸೆಳೆದವು ಕಲಾವಿದರ ಕುಂಚದಲ್ಲಿ ಅರಳಿದ ಚಿತ್ರಗಳು