ಬೆಂಗಳೂರು : ಚಿತ್ರಕಲಾ ಪರಿಷತ್ ಪ್ರತಿವರ್ಷ ಆಯೋಜಿಸುವ ಚಿತ್ರಸಂತೆ ಈ ಬಾರಿಯೂ ನಿರೀಕ್ಷೆಯಂತೆ ಲಕ್ಷಾಂತರ ಕಲಾಸಕ್ತರನ್ನು ಸೆಳೆಯಿತು. ಶಿವಾನಂದ ವೃತ್ತದಿಂದ ಅಶೋಕ ಹೋಟೆಲ್ವರೆಗೆ 1 ಕಿ.ಮೀ ದೂರದವರೆಗೆ ಕಣ್ಣುಗಳಿಗೆ ಹಬ್ಬದಂತೆ ಕಲಾಕೃತಿಗಳ ಮಾರಾಟ ಮತ್ತು ಪ್ರದರ್ಶನ ನಡೆದಿದೆ. ಚಿತ್ರಸಂತೆಯಲ್ಲಿ ಹೊರ ರಾಜ್ಯದ ಕಲಾವಿದರಿಗೆ ಉಚಿತ ಸೌಕರ್ಯ ಕಲ್ಪಿಸಲಾಗಿದೆ. ಹಾಗೆಯೇ, ಹಿರಿಯ ಕಲಾವಿದರು ಹಾಗೂ ವಿಶೇಷಚೇತನರಿಗೂ ತಮ್ಮ ಚಿತ್ರಕಲೆ ಪ್ರದರ್ಶನ ಹಾಗೂ ಮಾರಾಟಕ್ಕೆ ಸೌಕರ್ಯ ಒದಗಿಸಲಾಗಿದೆ.
ಬಿಹಾರದ ಚಿತ್ರಕಲಾವಿದ ಅಶೋಕ್ ಕುಮಾರ್ ಅವರು ನೈಸರ್ಗಿಕ ಬಣ್ಣಗಳಿಂದ ಬ್ರಶ್ ಬಳಸದೇ ಸಾಂಪ್ರದಾಯಿಕ ನಿಬ್ ಪೆನ್‌ನಿಂದ ಚಿತ್ರ ಬಿಡಿಸುತ್ತಿದ್ದರು. ಬೆಂಕಿ ಕಡ್ಡಿಗಳನ್ನು ಪೇಂಟ್ ಬ್ರಶ್ ರೀತಿ ಬಳಸಿ ಮಧುಬನಿ ಪ್ರಕಾರದ ಚಿತ್ರಗಳನ್ನು ರಚಿಸಿ ಗಮನ ಸೆಳೆದರು. ಇವು 500 ರೂ.ಗಳಿಂದ 25 ಸಾವಿರ ರೂ.ತನಕ ಮಾರಾಟವಾದವು.
ಚೆನ್ನೈನ ಕಲಾವಿದ ರಾಜು ಅವರು ರಚಿಸಿದ ಶುದ್ಧ ಮರಳು ಹಾಗೂ ಅಂಟು ಬಳಸಿದ ಹುಲಿ, ಬುದ್ಧ, ಗಣೇಶ, ಶಿವ ಮುಂತಾದ ಕಲಾಕೃತಿಗಳು ಸುಮಾರು 5 ಸಾವಿರ ರೂ.ಯಿಂದ 10 ಸಾವಿರ ರೂ.ವರೆಗೆ ಮರಾಟವಾಗುತ್ತಿದ್ದವು. ರಾಜ ರವಿವರ್ಮ ಶೈಲಿಯ ಭಾರತದ ಸಾಂಪ್ರದಾಯಿಕ ಶೈಲಿಯ ಚಿತ್ರಗಳನ್ನು ಉತ್ತರ ಪ್ರದೇಶದ ಮೋಹಿತ್ ವರ್ಮ ಮತ್ತು ತಂದೆ ಅಶೋಕ್ ವರ್ಮ ಇಬ್ಬರೂ ಸೇರಿ ತೈಲವರ್ಣದಲ್ಲಿ ರಚಿಸುತ್ತಿದ್ದರು. ತೈಲವರ್ಣ ಚಿತ್ರಗಳಿಗೆ ಸುಮಾರು 25 ಸಾವಿರ ರೂ.ಯಿಂದ 5 ಲಕ್ಷ ರೂಪಾಯಿ ಬೆಲೆ ನಿಗದಿಪಡಿಸಲಾಗಿತ್ತು.
ರಸ್ತೆ ಮೇಲೆ ಒಟ್ಟು 1,200 ಸ್ಟಾಲ್‌ಗಳು: 'ಚಿತ್ರಸಂತೆಯಲ್ಲಿ 6 ದಿವ್ಯಾಂಗ ಕಲಾವಿದರು ಭಾಗವಹಿಸಿದ್ದರು. ಒಟ್ಟು 2,300 ಮಂದಿ ತಮ್ಮ ಕಲಾಕೃತಿಗಳ ಮಾರಾಟಕ್ಕೆ ಚಿತ್ರಕಲಾ ಪರಿಷತ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 1,500 ಕಲಾವಿದರು ಭಾಗವಹಿಸಲು ಅವಕಾಶ ನೀಡಲಾಗಿದೆ. ರಸ್ತೆಯ ಮೇಲೆ ಒಟ್ಟು 1,200 ಸ್ಟಾಲ್‌ಗಳಿವೆ' ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.
ಚಿತ್ರಕಲಾ ಪರಿಷತ್ಗೆ ಸಿಎಂ ನೆರವಿನ ಭರವಸೆ : ಕರ್ನಾಟಕ ಚಿತ್ರಕಲಾ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ 20ನೇ ಚಿತ್ರಸಂತೆಯನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಉದ್ಘಾಟಿಸಿದ್ದಾರೆ. ಇದೇ ವೇಳೆ ಅವರು ಮಾತನಾಡಿ, 'ಚಿತ್ರಕಲಾ ಪರಿಷತ್ ಅತ್ಯಂತ ವಿಶಿಷ್ಟವಾಗಿರುವ ಸಂಸ್ಥೆ. ಇದು ರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು. ಎನ್ಎಸ್ಡಿ(ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ) ದೆಹಲಿಯಲ್ಲಿ ಅತ್ಯಂತ ಉನ್ನತ ಸ್ಥಾನ ಪಡೆದಿದೆ. ಅದರಂತೆ, ಬೆಂಗಳೂರಿಗೆ ಸೀಮಿತವಾಗದೇ ರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು. ರಾಷ್ಟ್ರೀಯ ಮಟ್ಟದಲ್ಲಿ ಈ ಸಂಸ್ಥೆಯನ್ನು ಬೃಹತ್ತಾಗಿ ಬೆಳೆಸಲು ಅಗತ್ಯ ನೆರವು, ಸಹಕಾರ ನೀಡಲಾಗುವುದು' ಎಂದು ಭರವಸೆ ಕೊಟ್ಟರು.
'ಬೆಂಗಳೂರನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬಲ್ಲ ಸಂಸ್ಥೆಗಳಲ್ಲಿ ಚಿತ್ರಕಲಾ ಪರಿಷತ್ ಕೂಡ ಒಂದು. ಐಐಟಿ, ಐಐಎಂ, ಎನ್ಎಸ್ಎಲ್ಯು ಮಟ್ಟಕ್ಕೆ ಚಿತ್ರಕಲಾ ಪರಿಷತ್ ಬೆಳೆಯಬೇಕು. ಚಿತ್ರಸಂತೆಯಿಂದ ಭಾರತದ ಸಂಸ್ಕೃತಿ ಬಿಂಬಿಸುವ ಕೆಲಸವಾಗುತ್ತದೆ. ಈ ರೀತಿಯ ಕೆಲಸ ಬೇರೆಲ್ಲೂ ಆಗುತ್ತಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು. ಚಿತ್ರಕಲಾ ಪರಿಷತ್ತಿಗೂ ಈಗ ರೆಕ್ಕೆಗಳು ಬಂದಿವೆ. ಸರಸ್ವತಿಯ ವಾಹನ ಪರಮಹಂಸದಂತೆ ಚಿತ್ರಸಂತೆ ಚಿತ್ರಕಲೆಯ ಪರಮಹಂಸವಾಗಿ ಬೆಳೆದಿದೆ' ಎಂದು ಸಿಎಂ ಖುಷಿ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕರ್ನಾಟಕ ಚಿತ್ರಕಲಾ ಪರಿಷತ್: ಪ್ರೊ. ಕೆ ಲಕ್ಷ್ಮ ಗೌಡಗೆ ಪ್ರೊ. ಎಂಎಸ್ ನಂಜುಂಡ ರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ