ಬೆಂಗಳೂರು: ಚಿಲುಮೆ ಸಂಸ್ಥೆ ಅಥವಾ ಅದರ ಮುಖಂಡರು ಯಾರೊಬ್ಬರೂ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ತಿಳಿಸಿದ್ದಾರೆ. ಸಂಸ್ಥೆಯು ಕಾಂಗ್ರೆಸ್ ನಾಯಕರನ್ನು ಸಂಪರ್ಕ ಮಾಡಿತ್ತು ಅನ್ನೋ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನನಗಂತೂ ಯಾರೂ ಕಾಂಟ್ಯಾಕ್ಟ್ ಮಾಡಿಲ್ಲ, ಊಹಾಪೋಹದ ವಿಷಯಗಳು ಹರದಾಡುತ್ತಿವೆ ಎಂದು ಹೇಳಿದರು. ಇದೇ ವೇಳೆ, ಕೃಷ್ಣಪ್ಪ, ರವಿಕುಮಾರ್ ಅಷ್ಟೇ ಅಲ್ಲ ಇದರಲ್ಲಿ ದೊಡ್ಡ ಷಡ್ಯಂತ್ರವಿದೆ ಎಂದರು.
ಬಿಬಿಎಂಪಿ ಆಯುಕ್ತರು, ಪಾಲಿಕೆ ಯಾರ ಕಂಟ್ರೋಲ್‌ನಲ್ಲಿದೆ? ಮುಖ್ಯಮಂತ್ರಿಗಳು, ಸರ್ಕಾರದ ಕಂಟ್ರೋಲ್ ತಾನೇ? ಬೆಂಗಳೂರಿನ ಕೆಲವು ಸಚಿವರು ಇದರಲ್ಲಿ ಭಾಗಿಯಾಗಿದ್ದು, ಹಣದ ಹೊಳೆ ಹರಿಸಿದ್ದಾರೆ. ಏಳೂವರೆ ಸಾವಿರ ಜನ ಅಲ್ಲಿ ಕೆಲಸ ಮಾಡುತ್ತಿದ್ದಾರೆ, ಇದಕ್ಕೆ ಹಣ ಎಲ್ಲಿಂದ ಬಂತು, ಇವರಿಗೆ ಸಂಬಳ ಕೊಟ್ಟಿದ್ಯಾರು? ಭ್ರಷ್ಟಾಚಾರದ ಹಣವನ್ನು ಕೊಟ್ಟು ಚಿಲುಮೆ ಸಂಸ್ಥೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಒಬ್ಬರೋ ಇಬ್ಬರೋ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ, ಅವರ ಮೇಲೆ ಕೇಸ್ ಹಾಕಿ ಇವರು ತಪ್ಪಿಸಿಕೊಳ್ಳುತ್ತಾರೆ ಎಂದು ದೂರಿದರು.
ಭಯೋತ್ಪಾದನೆಗೆ ಹಿಂದಿನ ಸರ್ಕಾರಗಳೇ ಕಾರಣ ಎಂಬ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಆರಗ ಜ್ಞಾನೇಂದ್ರ ಅವರ ಮಾತಿಗೆ ನಗಬೇಕೊ, ಅಳಬೇಕೊ ಗೊತ್ತಿಲ್ಲ ಎಂದರು. ಗೃಹ ಖಾತೆ ಹೇಗೆ ನಿಭಾಯಿಸಬೇಕು ಅನ್ನೋದೇ ಗೊತ್ತಿಲ್ಲ, ಅವರ ಮನೆಗೇ ಅವರ ಕಾರ್ಯಕರ್ತರೇ ಮುತ್ತಿಗೆ ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ : ಮತದಾರರ ಮಾಹಿತಿ ಸಂಗ್ರಹ ಆರೋಪ: ಮುಂದುವರೆದ ಚಿಲುಮೆ ಸಂಸ್ಥೆ ಮುಖ್ಯಸ್ಥನ ವಿಚಾರಣೆ