ಆನೇಕಲ್(ಬೆಂಗಳೂರು) : ವೃದ್ಧೆಯೊಬ್ಬರನ್ನು ರಾತ್ರಿ ವೇಳೆ ಕಾರಿನಲ್ಲಿ ಕರೆದುಕೊಂಡು ಬಂದು ನಗರದ ದೊಮ್ಮಸಂದ್ರದ ರಸ್ತೆಯಲ್ಲಿ ಇಳಿಸಿ ಪರಾರಿಯಾಗಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕರು ವಿಚಾರಿಸಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. ಸರ್ಜಾಪುರ ಪೊಲೀಸ್ ಠಾಣೆಗೆ ಘಟನೆಯ ಕುರಿತು ಮಾಹಿತಿ ನೀಡಲಾಗಿದೆ.
ವೃದ್ಧೆಯನ್ನು ವಿಚಾರಿಸಿದಾಗ, ತನ್ನ ಹೆಸರು ಓಬವ್ವ ಎಂಬುದಾಗಿ ತಿಳಿಸಿದ್ದಾರೆ. ಮಗಳು, ಅಳಿಯನ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಇವರು ದೊಮ್ಮಸಂದ್ರ ನಿವಾಸಿಯಾಗಿದ್ದು, ಕುರುಬ ಸಮುದಾಯಕ್ಕೆ ಸೇರಿದ್ದಾರೆ. ತೆಲುಗು ಭಾಷೆ ಮಾತನಾಡುತ್ತಾರೆ.
ಸರ್ಜಾಪುರದ ವಿ.ಕಲ್ಲಹಳ್ಳಿ ರಸ್ತೆಯಲ್ಲಿ ಪತ್ತೆಯಾದ ಇವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ರಾತ್ರಿ ವೇಳೆ ಅಳಿಯ, ಮಗಳು ತನ್ನ ಮೇಲೆ ಹಲ್ಲೆ ನಡೆಸಿದರು. ಮಂಜು, ಕೊರೆಯುವ ಚಳಿಯಲ್ಲೇ ನನ್ನನ್ನು ರಸ್ತೆಯಲ್ಲಿ ಬಿಟ್ಟು ಹೋದರು ಎಂದು ತಿಳಿಸಿದ್ದಾರೆ.
ಬನ್ನೇರುಘಟ್ಟದ ಏರ್ ಹ್ಯೂಮನಟಿಯನ್ ಹೋಮ್ಸ್ (ಪೋಸ) ಸರ್ವಿಂಗ್ ಹ್ಯೂಮನಟಿಯನ್ ಇನ್‌ಪ್ರೇಯರ್, ನಂ 20 ಮೈಲ್ ಸ್ಟೋನ್, ವಿಳಾಸದಲ್ಲಿ ಇದೀಗ ವೃದ್ಧೆ ಆಶ್ರಯ ಪಡೆಯುತ್ತಿದ್ದಾರೆ. ಸಂಬಂಧಪಟ್ಟವರು ಈ ವಿಳಾಸವನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಸಂಪರ್ಕ ಸಂಖ್ಯೆ 9739544444.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, 'ಕಾರಿನಲ್ಲಿ ರಾತ್ರಿವೇಳೆ ಅಜ್ಜಿಯನ್ನು ನಡುಬೀದಿಯಲ್ಲಿ ಬಿಟ್ಟುಹೋದ ಕುಟುಂಬ, ಮರಳಿ ಗೂಡಿಗೆ ಸೇರಿಸಿಕೊಳ್ಳಿ' ಎಂದು ವೈರಲ್ ಆಗುತ್ತಿದೆ.
"ರಾತ್ರಿಯೆಲ್ಲ ಚಳಿಯಲ್ಲಿ ವೃದ್ಧೆ ನರಳಿದ್ದಾರೆ. ಬೆಳಿಗ್ಗೆ ಸ್ಥಳೀಯರು ಗಮನಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವುದು ಒಂದು ಗಂಟೆ ತಡವಾಗಿತ್ತು. ಮಹಿಳೆಯರು ಸೇರಿ ವೃದ್ಧೆಯನ್ನು ಶುಚಿಗೊಳಿಸಿ ಉಪಹಾರ ನೀಡಿದ್ದಾರೆ. ಪೊಲೀಸರು ಬಂದು ನೀವೇ ಅನಾಥಾಶ್ರಮಕ್ಕೆ ಸೇರಿಸಿ ಎಂದು ಹೇಳಿದರು. ಬಳಿಕ ನಾವೇ ಸರ್ಜಾಪುರ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದೆವು. ಪೊಲೀಸ್ ಠಾಣೆಯಿಂದ ವೃದ್ಧಾಶ್ರಮಕ್ಕೆ ಸೇರಿಸಲು ಪತ್ರ ನೀಡಿದರು. ಅಷ್ಟೊತ್ತಿಗೆ ವೃದ್ಧಾಶ್ರಮದವರು ಆಗಮಿಸಿದರು. ಎಲ್ಲರೂ ಸೇರಿ ಆಟೋದಲ್ಲಿ ಕಳುಹಿಸಿಕೊಟ್ಟೆವು" ಎಂದು ಅನಿಲ್ ರೆಡ್ಡಿ ಎಂಬವರು ಹೇಳಿದರು.
ಮನುಕುಲಕ್ಕೆ ಮಾಡಿದ ಅವಮಾನ :ಈ ಕುರಿತು ಸ್ಥಳೀಯ ನಿವಾಸಿ ಸುಭಾಶ್ ಮಾತನಾಡಿ, "ಕೆಲವರಿಗೆ ತಾಯಿಯ ಸೌಭಾಗ್ಯವೇ ಇರುವುದಿಲ್ಲ. ಅಂಥದ್ರಲ್ಲಿ ಸ್ವಂತ ತಾಯಿಯನ್ನು ಈ ರೀತಿಯಾಗಿ ನಡುರಾತ್ರಿಯಲ್ಲಿ ಬಿಟ್ಟು ಹೋಗಿರುವುದು ಮನುಕುಲಕ್ಕೆ ಮಾಡಿದ ಅವಮಾನ. ಇಂಥ ಜನರಿಗೆ ಕಠಿಣ ಶಿಕ್ಷೆಯಾಗಬೇಕು. ತಾಯಿಗೆ ನ್ಯಾಯ ಕೊಡಿಸಬೇಕು" ಎಂದರು.
ಇದನ್ನೂ ಓದಿ : ಬೆಂಗಳೂರು: ಮಹಿಳಾ ಐಪಿಎಸ್ ಅಧಿಕಾರಿ ಕಾರಿಗೆ ಬೈಕ್‌ನಲ್ಲಿ ಗುದ್ದಿ ನಿಂದಿಸಿದ ವ್ಯಕ್ತಿ ಸೆರೆ