ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆ ಕದನ ಕಣ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಾ ಸಾಗಿದ್ದು ಕಾಂಗ್ರೆಸ್ ಪಕ್ಷ ಕ್ಷೇತ್ರಾದ್ಯಂತ ತುರುಸಿನ ಪ್ರಚಾರ ಕಾರ್ಯ ನಡೆಸಿದೆ.
ಆದರೆ, ಪ್ರಚಾರಕ್ಕೆ ಜನರನ್ನು ಸೇರಿಸುವ ವಿಚಾರದತ್ತ ಹೆಚ್ಚಿನ ಗಮನ ಹರಿಸಿರುವ ನಾಯಕರು ಸಾಮಾಜಿಕ ಅಂತರ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಮಾಸ್ಕ್ ಬಳಕೆ ಅಂತೂ ನೆಪಮಾತ್ರಕ್ಕೆ ಎಂಬಂತೆ ಗೋಚರಿಸುತ್ತಿದೆ. ವಿಪರ್ಯಾಸವೆಂದರೆ ಪಕ್ಷದ ಪ್ರಚಾರದಲ್ಲಿ ಸಕ್ರಿಯವಾಗಿ ದೊಡ್ಡಪ್ರಮಾಣದಲ್ಲಿ ಮಕ್ಕಳನ್ನೂ ಬಳಸಲಾಗುತ್ತಿದೆ.
ಒಂದು ಹಂತದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ ಗಮನಿಸಿದಾಗ ರಾಜ್ಯದಲ್ಲಿ ಕೊರೊನಾ ಸಂಪೂರ್ಣ ಮುಕ್ತವಾಗಿದೆ ಎನ್ನುವ ಭಾವನೆ ಮೂಡುತ್ತದೆ. ಕಳೆದ ಒಂದು ವಾರದಿಂದ ಗಣನೀಯವಾಗಿ ಪ್ರಕರಣಗಳು ಕಡಿಮೆಯಾಗಿದ್ದು, ಇದಕ್ಕೆ ಸೂಕ್ತ ಕಾರಣ ತಿಳಿದುಬರುತ್ತಿಲ್ಲ. ಆದರೆ, ಬೆಂಗಳೂರು ನಗರದಲ್ಲಿ ಪ್ರಸ್ತುತ 2000ದ ಆಸುಪಾಸು ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿವೆ. ಈಗಿರುವ ಸಂದರ್ಭ ನೂರಾರು ಜನ ಗುಂಪುಗೂಡಿ ಪ್ರಚಾರ ಸಭೆ ನಡೆಸುವ ಮೂಲಕ ಇನ್ನೊಮ್ಮೆ ನಗರದಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ದೊಡ್ಡಮಟ್ಟದ ಕೊಡುಗೆ ನೀಡುತ್ತಾರೆನೋ ಎಂಬ ಸಂಶಯ ಮೂಡುತ್ತಿದೆ.
ಮಕ್ಕಳ ಬಳಕೆ ಸಲ್ಲ:
ಮಾಸ್ಕ್ ಕಡ್ಡಾಯವಾಗಿ ಧರಿಸುವ ಮೂಲಕ ಸಾಂಕ್ರಾಮಿಕ ರೋಗ ತಡೆಯಬಹುದು ಎಂಬ ವಿವೇಚನೆ ವಯಸ್ಕರಿಗೆ ಇರುತ್ತದೆ. ಆದರೆ, ಮಕ್ಕಳಿಗೆ ಈ ಪರಿಜ್ಞಾನ ಇರುವುದು ಕಷ್ಟಸಾಧ್ಯ. ಹೀಗಿರುವಾಗ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಅಲ್ಲದೆ ಶಾಲೆ ಆರಂಭಿಸುವುದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿದೇಶಗಳ ಉದಾಹರಣೆ ನೀಡಿ ಶಾಲೆ ಆರಂಭಿಸಿದರೆ ಕೊರೊನಾ ಹೆಚ್ಚುತ್ತದೆ ಎಂದು ವಾದ ಮಂಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮಾಸ್ಕ ಧರಿಸದೆ ಮಕ್ಕಳು ಇಂದು ಪ್ರಚಾರ ಸಭೆಯಲ್ಲಿ ಪಾಲ್ಗೊಂಡದ್ದು ಕಂಡುಬಂತು. ಜನರ ಗುಂಪಿನ ಮಧ್ಯೆ ಕಾಂಗ್ರೆಸ್ ಬಾವುಟ ಹಿಡಿದು ಘೋಷಣೆ ಕೂಗುತ್ತಾ ತೆರಳಿದ ಮಕ್ಕಳು ಗಮನಸೆಳೆದರು.
ರಾಜರಾಜೇಶ್ವರಿನಗರ ವಿಧಾನಸಭೆ ವ್ಯಾಪ್ತಿಯ ಲಗ್ಗೆರೆಯಲ್ಲಿ ಸಂಜೆ ನಡೆದ ಪ್ರಚಾರ ಸಭೆ ಸಂದರ್ಭ ಮಕ್ಕಳನ್ನು ಪ್ರಚಾರಕ್ಕೆ ಬಳಸಿದ ಸನ್ನಿವೇಶ ಗೋಚರಿಸಿತು. ಪ್ರಚಾರಸಭೆಯಲ್ಲಿ ಮಕ್ಕಳನ್ನು ಬಳಸಬಾರದು ಎಂಬ ನಿಯಮ ಇರುವ ಹಿನ್ನೆಲೆ ಚುನಾವಣಾ ಆಯೋಗ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎನ್ನುವ ಕುತೂಹಲ ಕೂಡ ಮೂಡಿದೆ.