ಬೆಂಗಳೂರು: ಶಿಶುಪಾಲನಾ ಕೇಂದ್ರವೊಂದರಲ್ಲಿ ಮೂರು ವರ್ಷದ ಬಾಲಕ 2 ವರ್ಷದ ಬಾಲಕಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಬೇಬಿ ಕೇರ್ ಸೆಂಟರ್ಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸುಬ್ರಮಣ್ಯನಗರ ಪೊಲೀಸರು ನೋಟಿಸ್ ನೀಡಿದ್ದಾರೆ. ಅಲ್ಲದೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
ಎಷ್ಟು ವರ್ಷಗಳಿಂದ ಡೇ ಕೇರ್ ನಡೆಸುತ್ತಿದ್ದೀರಾ? ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದುಕೊಂಡಿದ್ದೀರಾ? ಮಕ್ಕಳ ಸುರಕ್ಷತೆಗೆ ಏನೆಲ್ಲಾ ಕ್ರಮ ಕೈಗೊಂಡಿದ್ದೀರಾ? ಎಂಬುದರ ಬಗ್ಗೆ ಡೇ ಕೇರ್ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಲ್ಲಸಂದ್ರದಲ್ಲಿ ಡೇ ಕೇರ್ನಲ್ಲಿ ಎರಡು ವರ್ಷದ ಬಾಲಕಿ ಮೇಲೆ ಮೂರು ವರ್ಷದ ಬಾಲಕ ಹಲ್ಲೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.
ಘಟನೆಗೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಡೇ ಕೇರ್ ತಾತ್ಕಾಲಿಕ ಬಂದ್ ಮಾಡಲಾಗಿದೆ. ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಸುಬ್ರಮಣ್ಯಪುರ ಪೊಲೀಸರು ಡೇ ಕೇರ್ಗೆ ದೌಡಾಯಿಸಿ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಬಾಲಕಿಯ ಪೋಷಕರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರ್ ಸೆಂಟರ್ನಲ್ಲಿ ಸಾಕಷ್ಟು ಮಕ್ಕಳಿದ್ದರು. ಕೊಠಡಿಯೊಂದರಲ್ಲಿ ಹಲ್ಲೆಗೊಳಗಾದ ಬಾಲಕಿ ಜೊತೆಗೆ ಬಾಲಕ ಸೇರಿ ಏಳು ಮಕ್ಕಳಿದ್ದರು. ಮಗುವೊಂದು ಶೌಚಾಲಯಕ್ಕೆ ತೆರಳಲು ಹೋಗಬೇಕಾಗಿದ್ದರಿಂದ ಸಿಬ್ಬಂದಿ ಕರೆದುಕೊಂಡು ಹೋಗಿದ್ದರು. ಈ ಮಧ್ಯೆ ಬಾಲಕ ಬಾಲಕಿಗೆ ಹೊಡೆದಿದ್ದನು. ನಿರಂತರವಾಗಿ ಏಳು ನಿಮಿಷಗಳ ಕಾಲ ಸೆರೆಯಾದ ವಿಡಿಯೋದಲ್ಲಿ ಹಲವು ಬಾರಿ ಹಲ್ಲೆ ಮಾಡಿದ್ದಾನೆ. ಪೋಷಕರು ಬಾಲಕಿಯನ್ನು ಮನೆಗೆ ಕರೆದೊಯ್ಯಲು ಬಂದಾಗ ಮುಖದ ಮೇಲೆ ಕೆನ್ನೆ ಹಾಗೂ ಕೈಗಳ ಮೇಲೆ ಗಾಯದ ಗುರುತು ಇರುವುದನ್ನು ಕಂಡಿದ್ದಾರೆ. ಇತರ ಮಕ್ಕಳಿಂದ ಮಾಹಿತಿ ಪಡೆದಿದ್ದರು. ಕೊಠಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಮಗುವಿನ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ.
ಹುಡುಗಿ ಪಕ್ಕ ನಿಂತಿದ್ದಕ್ಕೆ ಯುವಕನ ಮೇಲೆ ಹಲ್ಲೆ: ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ಹುಡುಗಿಯ ಪಕ್ಕದಲ್ಲಿ ವ್ಯಕ್ತಿಯೊಬ್ಬ ಬಂದು ನಿಂತಿದ್ದಕ್ಕಾಗಿ ಆತನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿತ್ತು. ನಾಗೇಶ್ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಹಲ್ಲೆ ಮಾಡಿದವರು ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಗೇಶ್ ತಮ್ಮ ತಾಯಿಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಂಡು ಹೋಗಿ, ಮನೆಗೆ ತೆರಳಲು ತಾಯಿ ಜೊತೆ ಬಸ್ ನಿಲ್ದಾಣದಲ್ಲಿ ಬಂದು ಕಾಯುತ್ತಿದ್ದರು. ಅದೇ ವೇಳೆ ಅಲ್ಲಿಗೆ ಬಂದ ವಿದ್ಯಾರ್ಥಿಯೊಬ್ಬಳು ನಾಗೇಶ್ ಪಕ್ಕ ನಿಂತಿದ್ದಳು. ಇದನ್ನು ಕಂಡು ಸಹಿಸದ ಯುವಕರ ಗುಂಪು ನಾಗೇಶ್ ಅವರ ಮೇಲೆ ಹಲ್ಲೆ ಮಾಡಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: Hassan Crime: ಜಗಳ ಬಿಡಿಸಲು ಬಂದ ಪೊಲೀಸ್ ಕಾನ್ಸ್ಸ್ಟೇಬಲ್ ಮೇಲೆಯೇ ಮಾರಣಾಂತಿಕ ಹಲ್ಲೆ : ಇಬ್ಬರು ವಶಕ್ಕೆ