ಬೆಂಗಳೂರು: ಮಹಿಳೆಯರಿಗೆ ಇರುವ ಶಿಶುಪಾಲನಾ ರಜೆ ಸೌಲಭ್ಯವನ್ನು ಒಂಟಿ ಪೋಷಕರಾಗಿರುವ ರಾಜ್ಯ ಸರ್ಕಾರಿ ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಂಟಿ ಪೋಷಕರಾಗಿರುವ ಅವಿವಾಹಿತ/ ವಿಚ್ಛೇದಿತ/ ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೂ ಆರು ತಿಂಗಳ ಅವಧಿಗೆ (180 ದಿನಗಳು) ಶಿಶುಪಾಲನಾ ರಜೆ ಸೌಲಭ್ಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಮಂಜೂರು ಮಾಡಿದೆ.
2021ರಲ್ಲಿ ಸರ್ಕಾರಿ ಆದೇಶದಲ್ಲಿ ವಿಧಿಸಲಾಗಿರುವ ಷರತ್ತುಗಳನ್ವಯ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಿಶುಪಾಲನಾ ರಜೆಯನ್ನು ಪಡೆದ ಅವಧಿಯಲ್ಲಿ ಸಂಬಂಧಿತ ಪುರುಷ ನೌಕರರು ವಿವಾಹ ಮಾಡಿಕೊಂಡರೆ ಆ ದಿನಾಂಕದಿಂದ ಶಿಶುಪಾಲನಾ ರಜೆ ತಾನಾಗಿಯೇ ರದ್ದಾಗಲಿದೆ. ಒಂಟಿ ಪೋಷಕರಾಗಿರುವ ಅವಿವಾಹಿತ/ವಿವಾಹ ವಿಚ್ಛೇದಿತ/ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೂ ಮಕ್ಕಳ ಆರೈಕೆಗಾಗಿ ಶಿಶುಪಾಲನಾ ರಜೆಯ ಅವಶ್ಯಕತೆ ಇದೆ ಎಂದು ಪ್ರಸ್ತಾವನೆಗಳು ಸ್ವೀಕೃತವಾಗಿದ್ದವು. ಈ ಹಿನ್ನೆಲೆಯಲ್ಲಿ ಶಿಶುಪಾಲನಾ ರಜೆ ಸೌಲಭ್ಯ ಒದಗಿಸಿ ಆದೇಶಿಸಲಾಗಿದೆ.
ಇದನ್ನೂ ಓದಿ:ಕಚೇರಿಗಳಲ್ಲಿ ಧಾರ್ಮಿಕ ಆಚರಣೆ ಸರ್ಕಾರದ ಬ್ಲೂ ಬುಕ್ನಲ್ಲಿರುವಂತೆ ಜಾರಿ: ಡಾ.ಜಿ.ಪರಮೇಶ್ವರ್
ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಮೂನೆ ಬಿಡುಗಡೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆಯ ಕುರಿತಾದ ಅಧಿಕೃತ ಆದೇಶ ಹೊರಬಿದ್ದ ಬೆನ್ನಲ್ಲೇ, ಅರ್ಜಿ ನಮೂನೆ ಸಹ ಬಿಡುಗಡೆಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಮೂನೆ ಬಿಡುಗಡೆಯಾಗಿದೆ. ಇದನ್ನು ಫಲಾನುಭವಿಗಳು ಸೇವಾ ಸಿಂಧು ಕೇಂದ್ರ ಸಂಪರ್ಕಿಸಿ ಆ ಮೂಲಕ ಇಲ್ಲವೇ ನೇರವಾಗಿ ವೆಬ್ಸೈಟ್ನಲ್ಲಿ ಸೇವಾ ಸಿಂಧು ಪೋರ್ಟಲ್ಗೆ ತೆರಳಿ ಅರ್ಜಿ ಭರ್ತಿ ಮಾಡಿ, ದಾಖಲೆಗಳನ್ನು ಸಲ್ಲಿಸಬಹುದಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮಿ ಯೋಜನೆ ನೀಡುವುದಾಗಿ ಕಾಂಗ್ರೆಸ್ ನಾಯಕರು ಚುನಾವಣೆಗೆ ಮುನ್ನವೇ ಗ್ಯಾರಂಟಿಯಾಗಿ ಘೋಷಿಸಿದ್ದರು. ಈ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂಪಾಯಿ ಸಹಾಯಧನ ನೀಡಲಾಗುತ್ತಿದ್ದು, ಲಾಭ ಪಡೆದುಕೊಳ್ಳಲು ಸರ್ಕಾರವು ಹಲವು ಷರತ್ತುಗಳನ್ನು ವಿಧಿಸಿದೆ. ಈಗಾಗಲೇ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದೀಗ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆ ಅರ್ಜಿ ನಮೂನೆ ಬಿಡುಗಡೆ ಮಾಡಲಾಗಿದ್ದು, ‘ಗೃಹಲಕ್ಷ್ಮೀ’ ಅರ್ಜಿ ನಮೂನೆಯಲ್ಲಿ ಮೂವರ ಭಾವಚಿತ್ರ ಇದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭಾವಚಿತ್ರ ಅರ್ಜಿ ನಮೂನೆಯಲ್ಲಿದೆ. ಈ ಯೋಜನೆಯ ಫಲಾನುಭವಿಗಳು ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ಇದೆ. ಆ ನಂತರ ಜುಲೈ 15 ರಿಂದ ಫಲಾನುಭವಿಗಳ ಆಯ್ಕೆ ಮಾಡುವುದು. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15ರಂದು ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ.