ಬೆಂಗಳೂರು: ಕಾರು ಹರಿದ ಪರಿಣಾಮ ಮಗು ಮೃತಪಟ್ಟಿರುವ ಘಟನೆ ಕಸುವಿನಹಳ್ಳಿಯ ಸಮೃದ್ಧಿ ಅಪಾರ್ಟ್ಮೆಂಟ್ ಮುಂಭಾಗ ನಡೆದಿದೆ. ನೇಪಾಳ ಮೂಲದ ಜೋಗ್ ಜುತಾರ್ ಹಾಗೂ ಅನಿತಾ ದಂಪತಿಯ ಅರ್ಬಿನಾ (3) ಮೃತ ಮಗು. ಡಿಸೆಂಬರ್ 9ರಂದು ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮೃದ್ಧಿ ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವನ್ನು ಗಮನಿಸದ ಅದೇ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ಕಾರು ಹರಿಸಿಕೊಂಡು ಹೋಗಿದ್ದರು. ಕಾರು ಹರಿದಿರುವ ಬಗ್ಗೆ ಮಾಹಿತಿ ಇಲ್ಲದ ಪೋಷಕರು, ಅಪಾರ್ಟ್‌ಮೆಂಟ್ ಗೇಟಿಗೆ ಸಿಲುಕಿಹಾಕಿಕೊಂಡು ಮಗು ಬಿದ್ದಿರಬಹುದೆಂದು ಭಾವಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಭುಜದ ಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು.
ನಂತರ ಪೋಷಕರು ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಗುವನ್ನು ಪರಿಶೀಲಿಸಿದ ವೈದ್ಯರು ತಕ್ಷಣ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮಗು ಮೃತಪಟ್ಟಿತ್ತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಆಂತರಿಕ ರಕ್ತಸ್ರಾವದಿಂದ ಮಗುವಿನ ಮೃತಪಟ್ಟಿರುವುದು ತಿಳಿದು ಬಂದಿತ್ತು. ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪೋಷಕರು, ಕಾರಣ ಪತ್ತೆಹಚ್ಚುವಂತೆ ಡಿಸೆಂಬರ್ 10 ರಂದು ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಪಾರ್ಟ್ಮೆಂಟ್ ಸಮೀಪದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ, ಮಗುವಿನ ಮೇಲೆ ಕಾರು ಹರಿದಿರುವುದು ಬೆಳಕಿಗೆ ಬಂದಿದೆ. ನ್ಯಾಯಾಲಯದ ಆದೇಶವನ್ನು ಪಡೆದು ಮುಂದಿನ ತನಿಖೆಗಾಗಿ ಪ್ರಕರಣವನ್ನು ಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು... ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ವ್ಯಕ್ತಿಯ ವಿರುದ್ಧ ದೂರು ದಾಖಲು
ಕಾರು ಹರಿದು ವಿಕಲಚೇತನ ಸಾವು(ದಕ್ಷಿಣ ಕನ್ನಡ): ಮತ್ತೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮುಖ್ಯ ಪೇಟೆಯಲ್ಲಿ ತೆವಳಿಕೊಂಡು ಹೋಗುತ್ತಿದ್ದ ವಿಕಲಚೇತನರೊಬ್ಬರ ಮೇಲೆ ಕಾರೊಂದು ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿತ್ತು. ಕಡಬದ ಅಂಗಡಿ ಮನೆ ನಿವಾಸಿ ಧರ್ನಪ್ಪ ಎಂಬವರು ಮೃತರು ಎಂದು ಗುರುತಿಸಲಾಗಿದೆ. ಮುಂಬೈ ಮೂಲದ ಕುಟುಂಬವೊಂದು ಮಂಗಳೂರಿನಿಂದ ಬಾಡಿಗೆ ಕಾರಲ್ಲಿ ಕಡಬ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು. ಕಡಬದ ಮುಖ್ಯ ಸರ್ಕಲ್ ಸಮೀಪ ರಸ್ತೆ ದಾಟಲು ಯತ್ನಿಸುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿತ್ತು.