ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಕಲ್ಲು ಕ್ವಾರಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಸಿಐಡಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ಚಿಕ್ಕಬಳ್ಳಾಪುರ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಶ್ರೀ ಸಾಯಿ ಶಿರಡಿ ಕ್ವಾರಿ ಮಾಲೀಕರು ಮತ್ತು ವ್ಯವಸ್ಥಾಪಕರು ಹಾಗೂ ಆರು ಮಂದಿ ಮೃತರು ಸೇರಿ 13 ಮಂದಿ ಆರೋಪಿಗಳ ವಿರುದ್ಧ ಸುಮಾರು 200 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿದೆ.
2021ರ ಫೆಬ್ರವರಿ 23ರಂದು ಸ್ಫೋಟ ಸಂಭವಿಸಿದ್ದು, ಆರು ಮಂದಿ ಮೃತಪಟ್ಟಿದ್ದರು. ನಿರ್ಲಕ್ಷ್ಯ ಮತ್ತು ಸ್ಫೋಟಕ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದು, ಬಂಧಿತ ಆರೋಪಿಗಳಾದ ಕ್ವಾರಿ ಮಾಲೀಕ, ಸ್ಥಳೀಯ ಬಿಜೆಪಿ ಮುಖಂಡ ಜಿ.ಎಸ್. ನಾಗರಾಜ್ ಮತ್ತು ಪಾಲುದಾರರಾದ ರಾಘವೇಂದ್ರ ರೆಡ್ಡಿ, ವೆಂಕಟಶಿವ ರೆಡ್ಡಿ, ಮಧುಸೂಧನ್ ರೆಡ್ಡಿ ಮತ್ತು ವ್ಯವಸ್ಥಾಪಕ ಪ್ರವೀಣ್ ಕುಮಾರ್, ದೇವನಹಳ್ಳಿಯ ಇಮ್ತಿಯಾಜ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಸ್ಫೋಟಕ ಸಾಗಿಸಿದ ಟಾಟಾ ಏಸ್ ವಾಹನದ ಚಾಲಕ ಮೊಹಮ್ಮದ್ ರಿಯಾಜ್ ಅನ್ಸಾರಿಯನ್ನು ಸಹ ಬಂಧಿಸಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಗುಡಿಬಂಡೆಯಲ್ಲಿರುವ ಕ್ವಾರಿ ಸ್ಥಳದಲ್ಲಿ ಶ್ರೀ ಸಾಯಿ ಶಿರಡಿ ಕ್ವಾರಿಯ ಒಟ್ಟು ಐವರು ಸಿಬ್ಬಂದಿ ಸೇರಿ ಆರು ಮಂದಿ ಸ್ಫೋಟಕಗಳನ್ನು ವಿಲೇವಾರಿ ಮಾಡಲು ಯತ್ನಿಸುತ್ತಿದ್ದರು. ವಿಧಿವಿಜ್ಞಾನ ತಜ್ಞರ ಪ್ರಾಥಮಿಕ ಪರೀಕ್ಷೆಯಲ್ಲಿ ಘಟನೆಯ ಸ್ಥಳದಲ್ಲಿ ಜಿಲೆಟಿನ್, ಪೆಟ್ರೋಲಿಯಂ ಜೆಲ್ ಮತ್ತು ಅಮೋನಿಯಂ ನೈಟ್ರೇಟ್‌ನ ಕುರುಹುಗಳು ಕಂಡುಬಂದಿತ್ತು. ಸ್ಪೋಟದಲ್ಲಿ ಬದುಕುಳಿದ ಮೊಹಮ್ಮದ್ ರಿಯಾಜ್ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ ಏಕೈಕ ಪ್ರತ್ಯಕ್ಷದರ್ಶಿಯಾಗಿದ್ದಾನೆ. ಉಳಿದ ಸಾಕ್ಷಿಗಳಾಗಿ ಸ್ಥಳೀಯ ಪೊಲೀಸರು ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಸೇರಿಸಲಾಗಿದೆ.
ಫೆ. 7ರಂದು ಕ್ವಾರಿ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದರು. ಫೆ. 22ರ ಸಂಜೆ ಮತ್ತೆ ಪೊಲೀಸರು ಭೇಟಿ ನೀಡಿ ಡ್ರಿಲ್ಲರ್ ಯಂತ್ರವನ್ನು ವಶಪಡಿಸಿಕೊಂಡಿದ್ದರು. ಕ್ವಾರಿಯಲ್ಲಿ ರಹಸ್ಯವಾಗಿ ಇರಿಸಲಾಗಿದ್ದ ಬಳಕೆಯಾಗದ ಸ್ಫೋಟಕ ವಿಲೇವಾರಿ ಮಾಡುವಂತೆ ಕ್ವಾರಿ ಮಾಲೀಕರು ಸಿಬ್ಬಂದಿಗೆ ಸೂಚಿಸಿದ್ದರು. ಸೈಟ್ ಎಂಜಿನಿಯರ್ ಉಮಾಮಹೇಶ್ ನೇತೃತ್ವದಲ್ಲಿ ಸಿಬ್ಬಂದಿ ಬಳಕೆಯಾಗದ ಸ್ಫೋಟಕಗಳನ್ನು ವಾಹನದಲ್ಲಿರಿಸಿ ನಾಶಮಾಡಲು ಪ್ರಯತ್ನಿಸುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
ಫೆ.23ರಂದು ನಡೆದ ಸ್ಫೋಟದಲ್ಲಿ ಗಂಗಾಧರ್ ಬಾಬು, ಅಭಿಲಾಶ್ ನಾಯಕ್, ಮುರಳಿಕೃಷ್ಣ, ಮಹೇಶ್ ಸಿಂಗ್ ಬೋರಾ (ನೇಪಾಳಿ ಪ್ರಜೆ), ಉಮಾಮಹೇಶ್ ಮತ್ತು ಕ್ವಾರಿ ಮೇಲ್ವಿಚಾರಕ ರಾಮು ಎನ್ನುವವರು ಮೃತಪಟ್ಟಿದ್ದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಕಲ್ಲು ಕ್ವಾರಿ ದುರಂತ: ಜಿಲೆಟಿನ್ ಸ್ಫೋಟದಿಂದ 6 ಜನ ದುರ್ಮರಣ