ಬೆಂಗಳೂರು: ಆಗಸ್ಟ್ 6 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದು, ನೀತಿ ಆಯೋಗದ ಸಭೆ ಜೊತೆಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಲಿದ್ದಾರೆ.
ಆಗಸ್ಟ್ 6 ರಂದು ನವದೆಹಲಿಯಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಕೋವಿಡ್ ಕಾರಣದಿಂದ ಈ ಹಿಂದೆ ವರ್ಚುವಲ್ ಮೂಲಕ ನಡೆದಿದ್ದ ಸಭೆ ಈ ಬಾರಿ ಭೌತಿಕವಾಗಿ ನಡೆಯಲಿದೆ. ರಾಜ್ಯದ ಯೋಜನೆಗಳು, ಅನುದಾನದ ಅಗತ್ಯತೆ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ಕಾರ್ಯಸೂಚಿಯ ವಿವರಗಳನ್ನು ಸಭೆಯಲ್ಲಿ ಸಿಎಂ ಪ್ರಸ್ತಾಪಿಸಿ ಬೇಡಿಕೆಗಳನ್ನು ಮಂಡಿಸಲಿದ್ದಾರೆ.
ಈಗಾಗಲೇ ದೆಹಲಿ ಪ್ರವಾಸ ನಿಗದಿಯಾಗಿರುವ ಹಿನ್ನೆಲೆ ಹೈಕಮಾಂಡ್ ನಾಯಕರ ಭೇಟಿಗೆ ಸಮಯಾವಕಾಶ ಪಡೆಯಲು ಸಿಎಂ ಮುಂದಾಗಿದ್ದಾರೆ. ರಾಷ್ಟ್ರಪತಿ ಪ್ರಮಾಣವಚನ ಕಾರ್ಯಕ್ರಮದ ವೇಳೆ ಸಮಯಾವಕಾಶದ ಕೊರತೆಯಿಂದ ಹೈಕಮಾಂಡ್ ನಾಯಕರ ಭೇಟಿ ಮಾಡದೆ ವಾಪಸ್ಸಾಗಿದ್ದ ಸಿಎಂ ಜುಲೈ 28 ರಂದು ಸರ್ಕಾರದ ಸಾಧನಾ ಸಮಾವೇಶದ ಉದ್ಘಾಟನೆಗೆ ಆಗಮಿಸಬೇಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಜೊತೆ ಸಂಪುಟ ವಿಸ್ತರಣೆ ಕುರಿತು ಮಾತುಕತೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಕಾರ್ಯಕ್ರಮ ರದ್ದುಗೊಂಡ ಹಿನ್ನೆಲೆ ಸಂಪುಟ ವಿಸ್ತರಣೆ ಮಾತುಕತೆಯೂ ಅಲ್ಲಿಗೆ ನಿಂತಿದೆ. ಹಾಗಾಗಿ, ಈಗಿನ ದೆಹಲಿ ಭೇಟಿ ವೇಳೆ ಮತ್ತೆ ಹೈಕಮಾಂಡ್ ನಾಯಕರ ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಸಿಎಂ ಮಾತುಕತೆ ನಡೆಸಲಿದ್ದಾರೆ.
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿರುವ ಕೆ. ಎಸ್ ಈಶ್ವರಪ್ಪ ಮತ್ತು ಅತ್ಯಾಚಾರ ಆರೋಪ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಬಿ ರಿಪೋರ್ಟ್ ಸಲ್ಲಿಸಿರುವ ಹಿನ್ನೆಲೆ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಮರಳಿ ಸೇರ್ಪಡೆ ಮಾಡಿಕೊಳ್ಳಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಓದಿ: ಸರಣಿ ಹತ್ಯೆ ವಿಚಾರವಾಗಿ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ವಾಗ್ಧಾಳಿ