ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಹೈಕೋರ್ಟ್ ಕಾನೂನು ಸೇವಾ ಸಮಿತಿ, ವಕೀಲರ ಪರಿಷತ್ ಹಾಗೂ ಬೆಂಗಳೂರು ವಕೀಲರ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕೋವಿಡ್-19 ಜಾಗೃತಿ "ಸುರಕ್ಷಿತವಾಗಿರಿ ಹಾಗೂ ಇತರರನ್ನು ಸುರಕ್ಷಿತವಾಗಿರಿಸಿ" ಕಾರ್ಯಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕ ಅವರು ಚಾಲನೆ ನೀಡಿದರು.
ಹೈಕೋರ್ಟ್ ಹಾಗೂ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವ ಕುರಿತು ಸಿಬ್ಬಂದಿ, ವಕೀಲರಿಗೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ನಂತರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಶೇಷವಾಗಿ ನಿರ್ಮಿಸಿದ್ದ ಕೋವಿಡ್ ಜಾಗೃತಿ ಸಂದೇಶಗಳನ್ನು ಒಳಗೊಂಡ ಎಲ್.ಇ.ಡಿ ವಾಲ್ ಹೊಂದಿರುವ ವಾಹನಕ್ಕೆ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕ ಚಾಲನೆ ನೀಡಿದರು.
ನಂತರ ಹೈಕೋರ್ಟ್ ನಿಂದ ಸಿಟಿ ಸಿವಿಲ್ ಕೋರ್ಟ್ ಮೂಲಕ ಸಾಗಿದ ಜಾಗೃತಿ ಜಾಥಾ ವಿಧಾನಸೌಧ, ಎಂ.ಜಿ. ರೋಡ್, ರೈಲ್ವೆ ಸ್ಟೇಷನ್, ಕಾರ್ಪೋರೇಷನ್ ಸರ್ಕಲ್, ಕೆ.ಆರ್.ಸರ್ಕಲ್, ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಜಯನಗರ, ಜೆ.ಪಿ.ನಗರ ಮಾರ್ಗವಾಗಿ ರಾತ್ರಿ 8:30 ಗಂಟೆಗೆ ಬನಶಂಕರಿಯಲ್ಲಿ ಸಮಾರೋಪಗೊಳ್ಳಲಿದೆ.
ಜಾಗೃತಿ ಪ್ರಚಾರ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್, ಅಲೋಕ್ ಆರಾಧೆ, ಬಿ.ವಿ.ನಾಗರತ್ನ, ಸುಜಾತ, ಬಿ.ವೀರಪ್ಪ, ಜಿ.ನರೇಂದ್ರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಉಪಸ್ಥಿತರಿದ್ದರು.