ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಹಾಲಿಗೆ ರಾಸಾಯನಿಕ ಹಾಗೂ ನೀರು ಬೆರೆಸುವ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳುವ ಕಾರ್ಯವನ್ನು ಸರ್ಕಾರ ಮಾಡದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಇದು ಮಂಡ್ಯ ಜಿಲ್ಲೆಯ ಮರ್ಯಾದೆ ಹಾಗೂ ರೈತರ ಭವಿಷ್ಯದ ಪ್ರಶ್ನೆ. ಈ ವಿಷಯದಲ್ಲಿ ಚೆಲ್ಲಾಟವಾಡುವುದನ್ನು ನಾನು ಎಂದಿಗೂ ಸಹಿಸಲಾರೆ. ಹಾಲನ್ನು ನಾವು ಅಮೃತಕ್ಕೆ ಸಮಾನ ಎಂದು ಹೇಳುತ್ತೇವೆ. ಅಂತಹ ಹಾಲಿನಲ್ಲೂ ಅವ್ಯವಹಾರ ಮಾಡುವವರಿಗೆ ಏನೆಂದು ಹೇಳಬೇಕು. ಹಾಲಿನ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯ ಜನ ಎಂದು ಬಂದಾಗ ಅವರ ಪರವಾಗಿ ಕಾಂಗ್ರೆಸ್ ಸದಾ ಇದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗುತ್ತದೆ ಎಂದಿದ್ದಾರೆ.
ಕಳೆದ ನಾಲ್ಕೈದು ತಿಂಗಳ ಹಿಂದೆ ಜಿಲ್ಲೆಯ ಒಕ್ಕೂಟದ ಹಾಲಿಗೆ ನೀರು ಮಿಶ್ರಣ ಮಾಡುತ್ತಿದ್ದ ಪ್ರಕರಣವನ್ನು ಬಯಲಿಗೆ ಎಳೆಯಲಾಯಿತು. ಇದು ಗಂಭೀರ ವಿಷಯವಾಗುತ್ತಿದ್ದಂತೆ ಸರ್ಕಾರವು ಸಿಒಡಿ ತನಿಖೆಗೆ ವಹಿಸಿತು. ಆರೋಪಿ ಮೇಲೆ ಸಹ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಈಗ ಆ ತನಿಖೆ ಸಹ ಅರ್ಧಕ್ಕೆ ನಿಂತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಇದೀಗ ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆ ಹಾಲು ಉತ್ಪಾದಕರ ಸಂಘದ ಬಿಎಂಸಿ ಕೇಂದ್ರದಲ್ಲಿ ಕೊಬ್ಬಿನ ಅಂಶ ಹೆಚ್ಚು ಲಭಿಸಬೇಕು ಎಂಬ ನಿಟ್ಟಿನಲ್ಲಿ ರಾಸಾಯನಿಕ ಮಿಶ್ರಣ ಮಾಡಿ ಹಾಲನ್ನು ಕಲಬೆರಕೆ ಮಾಡಲಾಗಿರುವ ಬಗ್ಗೆ ದೂರು ದಾಖಲಾಗಿದೆ. ಇದನ್ನು ಸ್ವತಃ ಅಲ್ಲಿನ ಸಂಘದ ಕಾರ್ಯದರ್ಶಿಯೇ ಮಾಡಿದ್ದಾರೆಂಬ ಆರೋಪವೂ ಇದೆ. ಪ್ರಕರಣ ದಾಖಲಾಗಿದ್ದು, ಮುಂದೆ ತನಿಖೆ ಯಾವ ಹಾದಿ ಹಿಡಿಯಲಿದೆ ಎಂಬುದೇ ನಮ್ಮ ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಲೋಕಾಯುಕ್ತ ಸಂಸ್ಥೆಯಲ್ಲಿ ಕೊರೊನಾ ಕೇಸ್ ಪತ್ತೆ: ಸ್ಪಷ್ಟನೆ ನೀಡಿದ ನಿಬಂಧಕರು
ಹೀಗೆ ಹಾಲಿಗೆ ರಾಸಾಯನಿಕವನ್ನು ಮಿಶ್ರಣ ಮಾಡುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ ಇದು ರಾಷ್ಟ್ರೀಯ ಆಹಾರ ಸಂರಕ್ಷಣಾ ಕಾಯ್ದೆ ಅನ್ವಯ ಹಾಲಿನ ಕಲಬೆರಿಕೆ ಶಿಕ್ಷಾರ್ಹ ಅಪರಾಧವಾಗಿದೆ. ಮಂಡ್ಯ ಜಿಲ್ಲೆವೊಂದರಲ್ಲೆ ಸುಮಾರು 8.49 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಅಂದರೆ, ಹೈನುಗಾರಿಕೆ ಮೇಲೆ ಇಲ್ಲಿ ಲಕ್ಷಾಂತರ ಕುಟುಂಬ ಅವಲಂಬಿತವಾಗಿವೆ. ಜಿಲ್ಲೆಯ ಅನೇಕ ಮಹಿಳೆಯರು, ರೈತ ಕುಟುಂಬದವರು ಸಾಲ ಸೌಲಭ್ಯಗಳನ್ನು ಪಡೆದು ಹಾಲು ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಾಲು ಉತ್ಪಾದಕ ಸಂಘಗಳಿಗೂ ಈ ಮೂಲಕ ಬೆಂಬಲವಾಗಿ ನಿಂತು ಹೆಮ್ಮರವಾಗಿ ಬೆಳೆಯಲು ಕಾರಣವಾಗಿದ್ದಾರೆ. ಆದರೆ ಕೆಲವರು ಮಾಡುವ ಇಂತಹ ತಪ್ಪುಗಳಿಂದ ಜಿಲ್ಲೆಗೆ, ಜಿಲ್ಲೆಯ ಜನತೆಗೆ ಹಾಗೂ ರೈತರಿಗೆ ಕೆಟ್ಟ ಹೆಸರು ಬರಲಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ವಿವರಿಸಿದ್ದಾರೆ.
ಕಾಂಗ್ರೆಸ್‌ನಿಂದ ಉಗ್ರ ಹೋರಾಟ: ಈ ಹಿಂದೆ ನಡೆದಿರುವ ಹಾಲಿಗೆ ನೀರು ಸೇರಿಸಿದ ಪ್ರಕರಣ ಹಾಗೂ ಈಗ ರಾಸಾಯನಿಕವನ್ನು ಮಿಶ್ರಣ ಮಾಡಿರುವ ಪ್ರಕರಣಗಳ ಬಗ್ಗೆ ಶೀಘ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಶೀಘ್ರದಲ್ಲಿಯೇ ಜಿಲ್ಲೆಯ ಕಾಂಗ್ರೆಸ್ ಮುಖಂಡರ ನಿಯೋಗವು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆಯ ತೀವ್ರತೆಯನ್ನು ತಿಳಿಸಲಿದ್ದೇವೆ. ನಮಗೆ ಅಲ್ಲಿಂದ ಯಾವ ರೀತಿ ಸ್ಪಂದನೆ ದೊರೆಯಲಿದೆ ಎಂಬುದರ ಮೇಲೆ ನಮ್ಮ ಮುಂದಿನ ನಿರ್ಧಾರ ಇರಲಿದೆ. ಆದರೆ, ಈ ಎರಡೂ ಪ್ರಕರಣಗಳನ್ನು ಸರ್ಕಾರ ನಿರ್ಲಕ್ಷ್ಯ ವಹಿಸಿದ್ದೇ ಆದಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಚಳವಳಿ ಮುಖಾಂತರ ಉಗ್ರ ಹೋರಾಟವನ್ನು ಮಾಡಲಿದೆ ಎಂದು ಎಚ್ಚರಿಸಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ