ಬೆಂಗಳೂರು: ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯೊಬ್ಬಳು ಯುವಕನನ್ನು ಪ್ರೀತಿಸುವ ನಾಟಕವಾಡಿ, ಮದುವೆಯಾಗಿ ನಂಬಿಸಿ ವಂಚಿಸಿರುವ ಪ್ರಕರಣ ನಗರದ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಂತೋಷ್ ಎಂಬಾತನಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆ (ಪತ್ನಿ) ಹಾಗೂ ಆಕೆಯ ಅಕ್ಕ ಹಾಗೂ ಭಾವ ವಂಚಿಸಿರುವುದಾಗಿ ದೂರಲಾಗಿದೆ.
2018ರಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಆರೋಪಿ ಮಹಿಳೆಗೆ, ಸಂತೋಷ್ ತಾನು ಕೆಲಸ ಮಾಡುವ ಕಂಪನಿಯಲ್ಲೇ ನೌಕರಿ ಕೊಡಿಸಿದ್ದ. ಇದೇ ಸಲುಗೆಯಿಂದ ಸಂತೋಷ್ ಹಾಗೂ ಆರೋಪಿ ಮಹಿಳೆಯ ನಡುವೆ ಪ್ರೇಮಾಂಕುರವಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಈ ಮೊದಲೇ ಮದುವೆಯಾಗಿದ್ದ ವಿಚಾರವನ್ನು ಮುಚ್ಚಿಟ್ಟ ಆರೋಪಿ ಮಹಿಳೆ, ಸಂತೋಷ್ ಜೊತೆ ಮದುವೆಯಾಗಿದ್ದಳು. ಆರೋಪಿತೆಯ ಅಕ್ಕ ಮತ್ತು ಭಾವ ಅರುಣ್ ಸೇರಿ ಮದುವೆ ಮಾಡಿಸಿದ್ದರು.
ಈ ಸಂದರ್ಭದಲ್ಲಿ ಮದುವೆಗಾಗಿ ಆರೋಪಿ ಮಹಿಳೆಯ ಭಾವ ಅರುಣ್, ಸಂತೋಷ್ ಬಳಿ ಐದು ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದ. ಇದಾದ ನಂತರ ಆಕೆಯ ಅಕ್ಕ ಮದುವೆಯ ನೆಪ ಹೇಳಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದಿದ್ದಳು. ಅಕ್ಕ ಭಾವ ಮಾತ್ರವಲ್ಲದೆ, ಆರೋಪಿ ಮಹಿಳೆ ಕೂಡ ದುಬಾರಿ ಐಫೋನ್‌ಗೆ ಬೇಡಿಕೆಯಿಟ್ಟು ಪಡೆದುಕೊಂಡಿದ್ದಳು. 2022ರ ನವೆಂಬರ್‌ನಲ್ಲಿ ಮದ್ದೂರಮ್ಮ ದೇವಾಲಯದಲ್ಲಿ ಇಬ್ಬರಿಗೂ ಮದುವೆ ಮಾಡಲಾಗಿತ್ತು.
ಆದರೆ, ಮದುವೆಯಾಗಿ ಮೂರು ತಿಂಗಳು ಮಾತ್ರ ಜೊತೆಗಿದ್ದ ಮಹಿಳೆ, ಶಾಸ್ತ್ರೋಕ್ತವಾಗಿ ಮದುವೆಯಾದರೂ ದೈಹಿಕ ಸಂಪರ್ಕಕಕ್ಕೆ ಅವಕಾಶ ನೀಡಿಲ್ಲ ಮತ್ತು ಮೋಸ ಮಾಡುವ ಉದ್ದೇಶದಿಂದಲೇ ಮದುವೆಯಾಗಿದ್ದಾಳೆ ಎಂದು ಸಂತೋಷ್ ದೂರು ನೀಡಿದ್ದಾರೆ. ಮದುವೆಯಾದ ಬಳಿಕ ಆರೋಪಿ ಪರಾರಿ ಆಗಿದ್ದಾಳೆ. ಆದರೆ ನಂತರವೂ ಆಕೆಯ ಭಾವ ಅರುಣ್, ತನ್ನಿಂದ ಹಣ ಪೀಕಿದ್ದಾನೆ. ಕಿಲಾಡಿ ಮಹಿಳೆ, ಆಕೆಯ ಅಕ್ಕ ಮತ್ತು ಭಾವನ ವಿರುದ್ಧ ಸಂತೋಷ್ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಟೆಲಿಗ್ರಾಂನಲ್ಲಿ ವಂಚನೆ: ಇನ್ವೆಸ್ಟ್ಮೆಂಟ್ ಹೆಸರಿನಲ್ಲಿ ಟೆಲಿಗ್ರಾಂ ವಂಚನೆ ಮಾಡುತ್ತಿದ್ದ ಸೈಬರ್ ಗ್ಯಾಂಗ್ ಅನ್ನು ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು ಬೇಧಿಸುವಲ್ಲಿ ಇತ್ತೀಚೆಗೆ ಯಶಸ್ವಿಯಾಗಿದ್ದರು. ಖತರ್ನಾಕ್ ಗ್ಯಾಂಗ್ ಟೆಲಿಗ್ರಾಂ ಚಾಟಿಂಗ್ ಮೂಲಕ ಮೊದಲು ಚಾಟ್ ಮಾಡಿ ಸಣ್ಣ ಮೊತ್ತ ಹಣ ಇನ್ವೆಸ್ಟ್ ಮಾಡುವಂತೆ ಹೇಳಿ, ರಿಟರ್ನ್ಸ್ ಕೊಟ್ಟು ನಂಬಿಕೆ ಬರುವಂತೆ ಮಾಡುತ್ತಿದ್ದರು. ನಂತರ ದೊಡ್ಡ ಮೊತ್ತದ ಹಣ ಇನ್ವೆಸ್ಟ್ ಮಾಡುವಂತೆ ಹೇಳುತ್ತಿದ್ದರು. ಇನ್ವೆಸ್ಟ್ ಮಾಡಿದ ನಂತರ ಮೋಸ ಮಾಡುತ್ತಿದ್ದರು. ಮೋಸ ಹೋದ ಇಬ್ಬರು ದಾಖಲಿಸಿದ್ದ ಪ್ರತ್ಯೇಕ ದೂರು ಆಧರಿಸಿ, ಪೊಲೀಸರು ಪ್ರಕರಣ ಬೇಧಿಸಿದ್ದರು.
ಇದನ್ನೂ ಓದಿ: ಚೈತ್ರಾ ಕೇಸ್ ಮಾದರಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪ