ಬೆಂಗಳೂರು: ಡೇಟಿಂಗ್ ಆ್ಯಪ್ನಲ್ಲಿ ಹೆಸರು ಬದಲಾಯಿಸಿ, ನಕಲಿ ಪ್ರೊಫೈಲ್ ಸೃಷ್ಟಿಸಿಕೊಂಡು ಯುವತಿಗೆ ವಂಚಿಸಿದ್ದ ಯುವಕನನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮುದಾಸಿರ್ ಬಂಧಿತ ಆರೋಪಿ. ನೊಂದ ಯುವತಿ ನೀಡಿದ ದೂರಿನ ಅನ್ವಯ, ನಕಲಿ ಪ್ರೊಫೈಲ್ ಸೃಷ್ಟಿಸಿ ವಂಚಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯು ಬಂಬಲ್ ಹೆಸರಿನ ಡೇಟಿಂಗ್ ಆ್ಯಪ್ನಲ್ಲಿ ಅನಿರುಧ್ ಎಂಬ ಹೆಸರಿನಲ್ಲಿ ನಕಲಿ ಪ್ರೊಫೈಲ್ ಹೊಂದಿದ್ದ. ಅದೇ ಆ್ಯಪ್ ಮೂಲಕ ಸಂಗಾತಿಯ ಹುಡುಕಾಟದಲ್ಲಿದ್ದ ಯುವತಿಗೆ ಆರೋಪಿಯ ಪರಿಚಯವಾಗಿತ್ತು. ಒಂದಷ್ಟು ಕಾಲ ಪರಸ್ಪರ ಸಂದೇಶಗಳು ರವಾನೆಯಾದ ಬಳಿಕ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಆರೋಪಿ ಆಕೆಯೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ. ಜೊತೆಗೆ ತನ್ನ ತಾಯಿಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿ ಯುವತಿ ಬಳಿ 1 ಲಕ್ಷ ರೂ. ಹಣವನ್ನು ಪಡೆದಿದ್ದ ಎನ್ನಲಾಗಿದೆ.
ನಂತರ ಆರೋಪಿ ತನ್ನ ತಾಯಿ ಮೃತಪಟ್ಟಿದ್ದಾರೆ ಎಂದು ಸುಳ್ಳಿನ ಕಥೆ ಕಟ್ಟಿದ್ದ. ಕೊನೆಗೆ ಸಹೋದರನನ್ನು ನೋಡಲು ದುಬೈಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದ ಆರೋಪಿ, ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದನು. ಆರೋಪಿಯ ಮೇಲೆ ಅನುಮಾನಗೊಂಡ ಯುವತಿಗೆ ನಂತರ ಆತ ಅನ್ಯಕೋಮಿನ ಯುವಕ. ಆ ಆರೋಪಿ ಯುವತಿಯರನ್ನು ವಂಚಿಸಲೆಂದೇ ಹೆಸರು ಬದಲಾಯಿಸಿಕೊಂಡಿದ್ದ, ಆತನ ಹೆಸರು ಮುದಾಸಿರ್ ಎಂಬುದು ತಿಳಿದಿದೆ.
ಅಲ್ಲದೇ ಆರೋಪಿಯನ್ನು ಪತ್ತೆ ಹಚ್ಚಿದಾಗ ಆತನಿಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿ ಮಕ್ಕಳಿರುವುದು ತಿಳಿದು ಬಂದಿದೆ. ಕೊನೆಗೆ ನೊಂದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರು ದಾಖಲಿಸಿಕೊಂಡ ಅಮೃತಹಳ್ಳಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಮದುವೆ ನಂತರ ಯುವತಿಗೆ ವಂಚಿಸಿದ್ದ ಯುವಕ: ತಿಂಗಳ ಹಿಂದೆ ಬಿಹಾರದ ಯುವಕನೊಬ್ಬ ಉತ್ತರ ಪ್ರದೇಶದ ಯುವತಿಯನ್ನು ಪ್ರೀತಿಸಿ, ಮತಾಂತರಗೊಳಿಸಿ ಮದುವೆಯಾದ ಬಳಿಕ ಮೋಸ ಮಾಡಿದ್ದ ಘಟನೆ ನಡೆದಿತ್ತು. ಮೋಸ ಮಾಡಿರುವ ಯುವಕ ವಿರುದ್ಧ ಯುವತಿ ನ್ಯಾಯಕ್ಕಾಗಿ ಆತನ ಮನೆ ಮುಂದೆಯೇ ಪ್ರತಿಭನೆಯನ್ನೂ ನಡೆಸಿದ್ದಳು. ಸಂತ್ರಸ್ತೆ ಯುವತಿ ನೋಯ್ಡಾದ ಕೋಚಿಂಗ್ ಸೆಂಟರ್ನಲ್ಲಿ ಕಲಿಯುತ್ತಿದ್ದಾಗ ಯುವಕ ತಾಲೀಫ್ನ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೂ ತಿರುಗಿತ್ತು. 2018ರಲ್ಲಿ ಯುವಕ ಕೆಲಸದ ನಿಮಿತ್ತ ದುಬೈಗೆ ಹೋಗಿದ್ದ. ಅಲ್ಲಿ ಹೋದವನು ಭಾರತದಲ್ಲಿದ್ದ ಯುವತಿಯನ್ನೂ ದುಬೈಗೆ ಬರುವಂತೆ ಆಮಂತ್ರಣ ಕೊಟ್ಟಿದ್ದ. ಯುವತಿ ಅಲ್ಲಿಗೆ ಹೋದಾಗ, ನಿನ್ನನ್ನು ಮದುವೆಯಾಗಬೇಕಾದರೆ ನೀನು ನನ್ನ ಧರ್ಮಕ್ಕೆ ಮತಾಂತರಗೊಳ್ಳಬೇಕು, ಆಗ ಮಾತ್ರವೇ ನನ್ನ ಮನೆಯವರು ನಿನ್ನನ್ನು ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದ.
ಹಾಗೆಯೇ ಯುವತಿ ಮತಾಂತರಗೊಂಡು ಮದುವೆ ಕೂಡಾ ಆಗಿದ್ದಳು. ದುಬೈಯಲ್ಲಿ ಇಬ್ಬರೂ ಕೆಲ ಕಾಲ ಸಂಸಾರ ಮಾಡಿದ್ದರು. ಯುವತಿ ಚಿಕಿತ್ಸೆಗಾಗಿ ನೋಯ್ಡಾಕ್ಕೆ ಬಂದಿದ್ದಾಗ ಯುವಕ ಒಂದು ದಿನ ಇದ್ದಕ್ಕಿದ್ದಂತೆ ದುಬೈಯಿಂದ ತನ್ನ ಹುಟ್ಟೂರಿಗೆ ವಾಪಸ್ ಆಗಿದ್ದನು. ಜೊತೆಗೆ ಮನೆಯಲ್ಲಿದ್ದ ನಗ, ನಗದು ಎಲ್ಲವನ್ನೂ ದೋಚಿದ್ದನು. ಚಿಕಿತ್ಸೆ ಮುಗಿಸಿ, ಯುವತಿ ವಾಪಸ್ ದುಬೈಗೆ ಹೋದಾಗ ಗಂಡ ಇಲ್ಲದೇ ಇರುವುದು, ಜೊತೆಗೆ ಮನೆಯಲ್ಲಿದ್ದ ಚಿನ್ನ, ಹಣ ಕಾಣೆಯಾಗಿರುವುದು ಗೊತ್ತಾಗಿತ್ತು. ಗಂಡ ತನ್ನ ಹುಟ್ಟೂರಿಗೆ ಪರಾರಿಯಾಗಿರುವುದು ಬೆಳಕಿಗೆ ಬಂದಿತ್ತು.
ಯುವತಿ ವಾಪಸ್ ಬಂದು ಗಂಡನ ಮನೆಯಲ್ಲಿ ನ್ಯಾಯ ಕೇಳಿದರೆ, ಮನೆಯವರು ಅವಳನ್ನು ಸೇರಿಸಿಕೊಳ್ಳಲು ತಯಾರಿರಲಿಲ್ಲ, ಜೊತೆಗೆ ತಾಲೀಫ್ ಕೂಡ ಆಕೆ ತನ್ನ ಹೆಂಡತಿಯೇ ಅಲ್ಲ ಎಂದು ಹೇಳತೊಡಗಿದ್ದ. ಹಾಗಾಗಿ ಯುವತಿ ಯುವಕನ ಮನೆ ಮುಂದೆಯೇ ನ್ಯಾಯಕ್ಕಾಗಿ ಪ್ರತಿಭಟನೆಗೆ ಕುಳಿತಿದ್ದಳು.
ಇದನ್ನೂ ಓದಿ: ಮತಾಂತರಿಸಿ ದುಬೈನಲ್ಲಿ ಮದುವೆಯಾಗಿ ಯುವತಿಗೆ ವಂಚನೆ; ನ್ಯಾಯಕ್ಕಾಗಿ ಪ್ರತಿಭಟನೆ