ಬೆಂಗಳೂರು: ನಕಲಿ ದಾಖಲೆಗಳನ್ನ ಬ್ಯಾಂಕ್ಗೆ ನೀಡಿ ಬಹುಕೋಟಿ ಹಣ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ವೈ.ಎಸ್.ಚೌಧರಿ ಇಂದು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ತೆಲುಗು ದೇಶಂ ಪಾರ್ಟಿಯ ಮಾಜಿ ಸಚಿವರಾಗಿರುವ ವೈ.ಎಸ್.ಚೌಧರಿ ಅವರಿಗೆ ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿತ್ತು.
ಆಂಧ್ರಾ ಬ್ಯಾಂಕ್ಗೆ ಸುಳ್ಳು ದಾಖಲೆ ನೀಡಿ 71 ಕೋಟಿ ರೂ. ವಂಚಿಸಿರುವ ಆರೋಪ ವೈ.ಎಸ್.ಚೌಧರಿ ಮೇಲಿದೆ. ಬಿಸ್ಟ್ ಹಾಗೂ ಕ್ರೋಪಾಟನ್ ಇಂಜಿನಿಯರಿಂಗ್ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ಹೆಸರಲ್ಲಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ 2017 ರಲ್ಲಿ ಸಿಬಿಐ ವೈ.ಎಸ್.ಚೌಧರಿ, ಕಂಪನಿ ಎಂ.ಡಿ ಶ್ರೀನಿವಾಸ್ ಕಲ್ಯಾಣ್ ರಾವ್ ಸೇರಿದಂತೆ ಕಂಪನಿಯ ಎಲ್ಲಾ ಡೈರೆಕ್ಟರ್ಗಳ ವಿರುದ್ಧ ದೂರು ದಾಖಲಿಸಿಕೊಂಡಿತ್ತು. 2018 ರಲ್ಲಿ ಪ್ರಕರಣ ಸಂಬಂಧ ಇಡಿ ಹಾಗೂ ಐಟಿ ಇಲಾಖೆ ಅಧಿಕಾರಿಗಳು ಸಹ ಚೌಧರಿಯವರ ಮನೆ ಮೇಲೆ ದಾಳಿ ನೆಡೆಸಿ ಕೆಲ ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದರು.
ಸದ್ಯ ಸಮನ್ಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗಿದ್ದ ವೈ.ಎಸ್.ಚೌಧರಿ ವಿಚಾರಣೆ ಎದುರಿಸಿದ್ದಾರೆ ಎಂದು ತಿಳಿದುಬಂದಿದೆ.